ನವದೆಹಲಿ ಎ.03 (Daijiworld News/MB) : ಲಾಕ್ಡೌನ್ ಕೊನೆಗೊಂಡ ಕೂಡಲೇ ನೀವು ಸಿನಿಮಾ ನೋಡಲು, ತಿರುಗಾಡಲು ಪ್ಲ್ಯಾನ್ ಮಾಡಬೇಡಿ. ಯಾಕೆಂದರೆ ಸರ್ಕಾರದ ಮೂಲಗಳ ಪ್ರಕಾರ ಲಾಕ್ಡೌನ್ ಏಪ್ರಿಲ್ 14 ರಂದು ಕೊನೆಯಾಗುವುದಿಲ್ಲ ಎಂದು ಸೂಚಿಸಿದ್ದು ಪ್ರಧಾನಿ ಮೋದಿ ಕೂಡಾ ಮುಖ್ಯಮಂತ್ರಿಗಳಿಗೆ ಇದು ದೀರ್ಘಕಾಲದ ಯುದ್ಧ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಟ್ವೀಟ್ ಮಾಡಿದ್ದು ರಾಜ್ಯ ಸರ್ಕಾರಗಳು ಏಪ್ರಿಲ್ 15 ರಂದು ಲಾಕ್ಡೌನ್ನ್ನು ಕೂಡಲೇ ತೆಗೆದು ಹಾಕಬಾರದು. ಹಂತಹಂತವಾಗಿ ಈ ಪ್ರಕ್ರಿಯೆ ನಡೆಯಬೇಕು. ಜನಸಂದಣಿ ಹೆಚ್ಚಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಠಾಕ್ರೆ ಅವರು ಲಾಕ್ಡೌನ್ ಇನ್ನೂ ದೀರ್ಘ ಕಾಲ ಮುನ್ನಡೆಸುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಆದರೆ ಕೂಡಲೇ ತೆಗೆದುಹಾಕುವ ಬದಲು ಹಂತ ಹಂತವಾಗಿ ಲಾಕ್ಡೌನ್ ತೆಗೆದು ಹಾಕುವ ಬಗ್ಗೆ ತಿಳಿಸಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ ಲಾಕ್ಡೌನ್ನ್ನು ಕೂಡಲೇ ತೆಗೆದುಹಾಕಲಾಗುವುದಿಲ್ಲ. 21 ದಿನ ಲಾಕ್ಡೌನ್ ಮುಗಿದ ಕೂಡಲೇ ೨೨ ದಿನ ರೈಲುಗಳು ಮತ್ತು ವಿಮಾನಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದಲ್ಲಿ 21 ದಿನಗಳವರೆಗೆ ಕಾಯ್ದುಕೊಂಡ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳು ವ್ಯರ್ಥವಾಗುತ್ತದೆ.
ಆದರೆ ಲಾಕ್ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿಲ್ಲ.
ತಬ್ಲೀಘಿ ಜಮಾಅತ್ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಕೊರೊನಾ ಕಂಡು ಬಂದ ಬಳಿಕ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ ಎಂದು ಸರ್ಕಾರಿ ಮೂಲಗಳು ಸೂಚಿಸುತ್ತವೆ. ಮುಂಬರುವ ವಾರದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಿಸಿದವರನ್ನು ಪತ್ತೆ ಹಚ್ಚುವಲ್ಲಿ ಎಷ್ಟು ಯಶಸ್ವಿಯಾಗಿದೆ ಎಂದು ತಿಳಿದು ಬರಬೇಕಾಗಿದೆ.
ಏತನ್ಮಧ್ಯೆ, ಅರುಣಾಚಲ ಸಿಎಂ ಪೆಮಾ ಖಂಡು ಟ್ವೀಟ್ ಮಾಡಿ ಏಪ್ರಿಲ್ 15 ರಂದು ಲಾಕ್ ಡೌನ್ ಕೊನೆಗೊಳ್ಳಲಿದೆ ಎಂದು ಹೇಳಿದ್ದು ಆ ಬಳಿಕ ಟ್ವೀಟ್ ಅನ್ನು ತೆಗೆದು ಹಾಕಿದ್ದರು. ಆ ಬಳಿಕ ಮುಖ್ಯಮಂತ್ರಿಗಳ ಸಭೆ ನಡೆದ ಬಳಿಕ ಟ್ವೀಟ್ ಮಾಡಿದ ಅವರು, "ಮುಂದಿನ ಏಪ್ರಿಲ್ 15 ರಂದು ಲಾಕ್ಡೌನ್ ಪೂರ್ಣಗೊಳ್ಳುತ್ತದೆ. ಆದರೆ ಅದರ ಅರ್ಥ ಜನರು ಆರಾಮವಾಗಿ ರಸ್ತೆಯಲ್ಲಿ ಓಡಾಟ ಮಾಡಬಹುದು ಎಂದಲ್ಲ. ನಾವೆಲ್ಲರೂ ಜವಾಬ್ದಾರಿಯುತವಾಗಿರಬೇಕು. ಸಾಮಾಜಿಕ ಅಂತರ ಹಾಗೂ ಲಾಕ್ಡೌನ್ ಮಾತ್ರ ಕೊರೊನಾದ ವಿರುದ್ಧ ನಡೆಸಬಹುದಾದ ಹೋರಾಟದ ಮಾರ್ಗವಾಗಿದೆ ಎಂದಿದ್ದಾರೆ.
ಆದರೆ ಶೀಘ್ರವಾಗಿ ತಮ್ಮ ತಮ್ಮ ಟ್ವೀಟ್ ಅನ್ನು ಅಳಿಸಿದ್ದಾರೆ.
ಹೀಗಿರುವಾಗ ಜನರು ಲಾಕ್ಡೌನ್ ಎಪ್ರಿಲ್ 14 ರಂದೇ ಕೊನೆಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಎಪ್ರಿಲ್ ೧೫ ರಂದು ಮನೆಯಿಂದ ಹೊರಬಂದು ಸುತ್ತಾಡಬೇಕೆಂಬ ಪ್ಲ್ಯಾನ್ ಮಾಡದಿರುವುದು ಒಳಿತು.