ಬೆಂಗಳೂರು, ಎ.03 (DaijiworldNews/PY) : ಯುವಕನೋರ್ವ ಲಾಕ್ಡೌನ್ ನಡುವೆಯೇ ಸಿಗರೇಟ್ಗಾಗಿ 12 ಕಿ.ಮೀ ಸುತ್ತಾಡಿದ್ದು, ಲಾಕ್ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರನ್ನೇ ತಳ್ಳಿ ಪರಾರಿಯಾದ ಘಟನೆ ಮಾ.23ರಂದು ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಅನುಜ್ ಮೋಡಾ (31) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಸಿಗರೇಟ್ಗಾಗಿ ಇಂದಿರಾನಗರದ ಅನುಜ್ ಎಂಬಾತ ತನ್ನ ಮನೆಯ ಸುತ್ತಮುತ್ತ ಹುಡುಕಾಡಿದ್ದ. ಅಂಗಡಿ ಎಲ್ಲಯೂ ತೆರದಿರಲಿಲ್ಲ. ನಂತರ ಇಂದಿರಾನಗರದಿಂದ ತನ್ನ ಕಾರಿನಲ್ಲಿ ಬಿಟಿಎಂ ಲೇಔಟ್ಗೆ ಬಂದಿದ್ದ. ಸಿಗರೇಟ್ ಅಲ್ಲಯೂ ದೊರಕಲಿಲ್ಲ. ಬಳಿಕ ಕೋರಮಂಗಲಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದರು.
ಕೋರಮಂಗಲ ವಾಟರ್ ಟ್ಯಾಂಕ್ನಿಂದ ಹೋಟೆಲ್ ಸುಖಸಾಗರ್ ಜಂಕ್ಷನ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಎಚ್.ಶಿವಕುಮಾರ್ ಹಾಗೂ ಸಿಬ್ಬಂದಿ, ತಡೆದಿದ್ದು, ಆ ಸಂದರ್ಭ ಆರೋಪಿ ಸಿಬ್ಭಂದಿಯ ಜೊತೆ ಇಲ್ಲಿ ಎಲ್ಲಾದರೂ ಸಿಗರೇಟ್ ಸಿಗುತ್ತಾ ಎಂದು ಕೇಳಿದ್ದ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಎಂದರು.
ಸಿಬ್ಬಂದಿಯು ಆರೋಪಿಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಅದೇ ಸಂದರ್ಭ ಆರೋಪಿಯು ಸಿಬ್ಬಂದಿಯನ್ನು ತಳ್ಳಿ ಹಾಕಿದ್ದು, ಕಾರಿ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.