ಬೆಂಗಳೂರು, ಎ.03 (Daijiworld News/MB) : ಕೊರೊನಾ ವೈರಸ್ ಕುರಿತಾಗಿ ಆರೋಗ್ಯ ಇಲಾಖೆಯಿಂದ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ ಮೇಲೆ ಸಾರಾಯಿ ಪಾಳ್ಯದ ಸಾದಿಕ್ ಲೇಔಟ್ನಲ್ಲಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಆರೋಗ್ಯ ನಿರೀಕ್ಷಕ ಮುನಿರಾಜು ಗುರುವಾರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಅವರು ಕೃಷ್ಣವೇಣಿ ಅವರನ್ನು ಠಾಣೆಗೆ ಕರೆದೊಯ್ದು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
15 ದಿನಗಳಿಂದ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದು ಬುಧವಾರ ಆಶಾ ಕಾರ್ಯಕರ್ತೆಯರು ಮಾಹಿತಿ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಮಸೀದಿಯ ಧ್ವನಿವರ್ಧಕದಿಂದ ಆರೋಗ್ಯ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ ನೀಡದೆ, ಅವರನ್ನು ಇಲ್ಲಿಂದ ಓಡಿಸಿ ಎಂದು ಹೇಳಿದ್ದು ಜನರು ಸುತ್ತುವರಿದು ಕೃಷ್ಣವೇಣಿ ಅವರ ಮೊಬೈಲ್ ಕಸಿದುಕೊಂಡು ಸಮೀಕ್ಷೆಯ ಕಾಗದ ಪತ್ರ ಹರಿದು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಮಾಹಿತಿ ನೀಡಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಪಂದಿಸಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಕೃಷ್ಣವೇಣಿ ಅವರ ಮನೆಗೆ ಡಿಸಿಎಂ ಅಶ್ವತ್ಥನಾರಾಯಣ ಭೇಟಿ ನೀಡಿ ಸಾಂತ್ವನ ಹೇಳಿ, ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.