ನವದೆಹಲಿ, ಎ.03 (Daijiworld News/MB) : ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ದೇಶದ ಹೋರಾಟವನ್ನು ದೀಪ ಬೆಳಗುವುದರ ಮೂಲಕ ಪ್ರದರ್ಶಿಸೋಣ ಎಂದು ಶುಕ್ರವಾರ ಹೇಳಿದ್ದು ಪ್ರತಿಪಕ್ಷಗಳ ಮುಖಂಡರು ಭಾರೀ ಟೀಕೆ ಮಾಡಿದ್ದಾರೆ.
ಪ್ರಧಾನಿ ಮೋದಿ ಏಪ್ರಿಲ್ 5, ಭಾನುವಾರ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ರಾತ್ರಿ 9 ಗಂಟೆಗೆ ಸರಿಯಾಗಿ, ಒಂಬತ್ತು ನಿಮಿಷಗಳು ದೀಪ, ಮೇಣದ ಬತ್ತಿ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಶ್ಲೈಟ್ ಬೆಳಗುವಂತೆ ಕರೆ ನೀಡಿದ್ದಾರೆ.
ಇದನ್ನು ಟ್ವೀಟ್ ಮೂಲಕ ಟೀಕೆ ಮಾಡುತ್ತಾ ಪ್ರಧಾನಿ ಮೋದಿಯವರನ್ನು ಪ್ರಧಾನ್ ಶೋಮ್ಯಾನ್ ಎಂದಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, 'ನಾನು ಪ್ರಧಾನ್ ಶೋಮ್ಯಾನ್ ಅವರ ಮಾತುಗಳನ್ನು ಆಲಿಸಿದೆ. ಮೋದಿಯವರು ಜನರ ನೋವು, ಅವರ ಮೇಲಿನ ಹೊರೆ, ಅವರ ಆರ್ಥಿಕ ಆತಂಕಗಳನ್ನು ಹೇಗೆ ದೂರಮಾಡಬೇಕೆಂಬುದರ ಕುರಿತಾಗಿ ಏನೂ ಹೇಳಲಿಲ್ಲ. ಲಾಕ್ಡೌನ್ ನಂತರದ ದಿನಗಳಲ್ಲಿ ಉದ್ಬವಿಸಿರುವ ಸಮಸ್ಯೆಗಳ ಬಗ್ಗೆ ಏನೂ ಹಂಚಿಕೊಳ್ಳಲಿಲ್ಲ. ಭವಿಷ್ಯದ ದೂರದೃಷ್ಟಿ ಅವರಿಗಿಲ್ಲ. ಇದು ಭಾರತದ ಫೋಟೋ-ಅಪ್ ಪ್ರಧಾನ ಮಂತ್ರಿ ಪ್ರದರ್ಶಿಸಿದ ಒಂದು ಒಳ್ಳೆಯ ಕ್ಷಣ! ಎಂದಿದ್ದಾರೆ.
ಇದನ್ನು ಟೀಕೆ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ನಾವು ಏಪ್ರಿಲ್ 5 ರಂದು ದೀಪ ಬೆಳಗುವಂತೆ ನೀವು ಹೇಳಿರುವ ಮಾತನ್ನು ಕೇಳುತ್ತೇವೆ. ಹಾಗೆಯೇ ನೀವು ನಮ್ಮ ಮಾತನ್ನು ಕೇಳಿ. ನೀವು ದಯಮಾಡಿ ಸಾಂಕ್ರಾಮಿಕ ರೋಗ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರ ಸಲಹೆಗಳನ್ನು ಕೇಳಿ ಎಂದು ಹೇಳಿದ್ದಾರೆ.
ಇನ್ನು ಮತ್ತೊಬ್ಬ ಕಾಂಗ್ರೆಸ್ ಮುಂಖಂಡ ಅಭಿಷೇಕ್ ಸಾಂಘ್ವಿ, 'ಪ್ರಧಾನಿ ಮೋದಿ ಅವರು ಜನರಿಗೆ ಅನಗತ್ಯ ಮನೆಗೆಲಸ ನೀಡುವುದನ್ನು ನಿಲ್ಲಿಸಬೇಕೆಂದು ನಾನು ಬಯಸುತ್ತೇನೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಉದ್ಬವಿಸಿರುವ ವಲಸೆ ಕಾರ್ಮಿಕ ಬಿಕ್ಕಟ್ಟನ್ನು ಸಕ್ರಿಯವಾಗಿ ಪರಿಹರಿಸಲು ಪ್ರಾರಂಭಿಸಬೇಕು' ಎಂದು ಟ್ವೀಟಿಸಿದ್ದಾರೆ.