ಬೆಂಗಳೂರು, ಎ.03 (DaijiworldNews/PY) : ಬೆಂಗಳೂರು ವಿಶ್ವವಿದ್ಯಾಲಯವು ಆನ್ಲೈನ್ ತರಗತಿ ನಡೆಸುತ್ತಿದ್ದು. ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಮುಂದೂಡಿದೆ.
ಬೆಂಗಳೂರು ವಿಶ್ವವಿದ್ಯಾಲಯವು ಯುಜಿಸಿಯ ಮಾರ್ಗಸೂಚಿ ಪ್ರಕಾರವಾಗಿ ತನ್ನೆಲ್ಲಾ ವಿಭಾಗಳಲ್ಲೂ ಆನ್ಲೈನ್ ತರಗತಿಯನ್ನು ಯಶಸ್ವಿಯಾಗಿ ಮಾಡುತ್ತಿದೆ. ವಿಭಾಗದ ಮುಖ್ಯಸ್ಥರುಗಳು ಈ ವಿಚಾರವಾಗಿ ತಮ್ಮ ಸಿಬ್ಬಂದಿ ವರ್ಗದೊಂದಿಗೆ ಆನ್ಲೈನ್ ಸಭೆಯನ್ನು ನಡೆಸಿ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ.
ಸೂಚನೆಯಂತೆ ಜೂಮ್ ಎನ್ನುವ ತಂತ್ರಾಂಶವನ್ನು ಉಪಯೋಗಿಸಿಕೊಂಡು ಎಂದಿನಂತೆ ಆನ್ಲೈನ್ ಮೂಲಕವೇ ತರಗತಿ ನಡೆಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳೂ ಸಹ ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಶೇಕಡ 90%ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
ಶಿಕ್ಷಕರು ಆನ್ಲೈನ್ ಸಾಧನಗಳಾದ ಜೂಮ್, ವೆಬೆಕ್ಸ್, ಸ್ಕೈಪ್, ಗೂಗಲ್, ಸಿಸ್ಕೊ ಮುಂತಾದವುಗಳನ್ನುಉಪಯೋಗಿಸಿಕೊಂಡು ಪ್ರಾಜೆಕ್ಟ್, ಸೆಮಿನಾರ್, ಆನ್ಲೈನ್ ಟೆಸ್ಟ್ ಮತ್ತು ಅಸೈನ್ಮೆಂಟ್ ನೀಡುತ್ತಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ದೇಶವೇ ಲಾಕ್ಡೌನ್ ಆದ ಬಳಿಕ, ಹೋಂ ಕ್ವಾರಂಟೈನ್ ಆಗಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಮಾನಸಿಕವಾಗಿ ಏಕತಾನತೆ ಹಾಗೂ ಖಿನ್ನತೆಗೆ ಒಳಗಾಗಿದ್ದರು. ಆದರೆ, ವಿದ್ಯಾರ್ಥಿಗಳು ತಂತ್ರಜ್ಞಾನದ ಸಹಾಯದಿಂದಾಗಿ ಆನ್ಲೈನ್ ತರಗತಿಯಲ್ಲಿ ಭಾಗವಹಿಸುವ ಮೂಲಕ ಹೊಸ ಚೈತನ್ಯ ಪಡೆದುಕೊಂಡಿದ್ದಾರೆ. ಅಲ್ಲದೇ, ಜೂಮ್ ತಂತ್ರಾಂಶದ ಬಳಕೆ ಸರಳವಾಗಿರುವ ಕಾರಣ ವಿದ್ಯಾರ್ಥಿ ಸ್ನೇಹಿಯಾಗಿದೆ. ಇದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಏರ್ಪಟ್ಟಿದ ಅಂತರ ಕುಗ್ಗಿದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡತಾಗಿದೆ.
ಅಂತರ್ಜಾಲದ ಕುಂಠಿತ ವೇಗ ಮತ್ತು ಕನೆಕ್ಟಿವಿಟಿ ಸಮಸ್ಯೆಯನ್ನು ಗ್ರಾಮೀಣ ಪ್ರದೇಶದಲ್ಲಿನ ಕೆಲವು ವಿದ್ಯಾರ್ಥಿಗಳು ಎದುರಿಸುತ್ತಿದ್ದರು, ಆನ್ಲೈನ್ ತರಗತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಶಿಕ್ಷಕರು ಮೊದಲಿನ ವೇಳಾಪಟ್ಟಿಯ ಪ್ರಕಾರ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಭರವಸೆ ಇದೆ.
ಪರೀಕ್ಷಾ ಶುಲ್ಕ ಪಾವತಿಯ ಅಂತಿಮ ದಿನಾಂಕವನ್ನು ಬೆಂಗಳೂರು ವಿಶ್ವವಿದ್ಯಾಲಯವು ಮುಂದೂಡಿದ್ದು, ವಿಶ್ವವಿದ್ಯಾಲಯ ಪುನರಾರಂಭಗೊಂಡ ಬಳಿಕ ದಿನಾಂಕವನ್ನು ಪ್ರಕಟಿಸುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದುಕೊಂಡು ತಮ್ಮ ವ್ಯಾಸಂಗದ ಮೇಲೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.