ಬಾಗಲಕೋಟೆ, ಎ.03 (DaijiworldNews/PY) : ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಗುರುವಾರ ಬಾಗಲಕೋಟೆ ನಗರದಲ್ಲಿ ದೃಢಪಟ್ಟಿದೆ. ಸೋಂಕಿತ ವೃದ್ದ ನಗರ ಬಿಟ್ಟು ಎಲ್ಲಿಗೂ ತೆರಳಲಿಲ್ಲ. ಹಾಗಾಗಿ, ಸೋಂಕಿನ ಮೂಲ ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಆರ್.ರಾಜೇಂದ್ರ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಬೆಂಗಳೂರಿನಿಂದ ಸೋಂಕಿತ ವ್ಯಕ್ತಿಯ ಮಗ ಹಾಗೂ ಮಗಳು ವಾಪಾಸ್ಸಾಗಿದ್ದರು. ಅವರಿಬ್ಬರನ್ನು ಸೇರಿದಂತೆ ವೃದ್ಧನ ಪತ್ನಿ, ತಮ್ಮ, ತಮ್ಮನ ಹೆಂಡತಿ ಒಳಗೊಂಡಂತೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 10 ಮಂದಿಯನ್ನು ಈಗಾಗಲೇ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಎಲ್ಲರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ವೃದ್ದ ಇರುತ್ತಿದ್ದ ಅಂಗಡಿಗೆ ಯಾರಾದರೂ ಬಂದಿದ್ದು, ಅವರಿಂದ ಸೋಂಕು ಹರಡಿದೆ ಎಂಬ ವಿಚಾರವಾಗಿಯೂ ತನಿಖೆ ಕೈಗೊಳ್ಳಲಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ರಾಸಾಯನಿಕ ಸಿಂಪಡಣೆ ಕಾರ್ಯ ನಡೆದಿದೆ ಎಂದು ತಿಳಿಸಿದರು.
ವೃದ್ಧನ ಮನೆ ಹಾಗೂ ಅಂಗಡಿ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ಪ್ರದೇಶ ಎಂದು ಗುರುತಿಸಲಾಗಿದ್ದು, ಅಲ್ಲಿಂದ ಹೊರಗೆ ಬರುವುದು ನಿಷೇಧಿಸಲಾಗಿದೆ. ಜಿಲ್ಲಾಡಳಿತದಿಂದಲೇ ಸ್ಥಳೀಯರಿಗೆ ಹಾಲು, ದಿನಪತ್ರಿಕೆ, ಕಿರಾಣಿ ಸಾಮಗ್ರಿ, ಔಷಧಿ, ತರಕಾರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಈಗ ಕೊಟ್ಟಿರುವ ಸಂಖ್ಯೆಗಳಿಗೆ ಕರೆ ಮಾಡಿದಲ್ಲಿ ಮನೆಗೆ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.