ಶಿವಮೊಗ್ಗ, ಎ.03 (Daijiworld News/MB) : ದೆಹಲಿಯಲ್ಲಿ ನಿಜಾಮುದ್ದೀನ್ ಸಭೆ ನಡೆಸುವ ಅಗತ್ಯವೇನಿತ್ತು. ಕೊರೊನಾ ಭೀತಿ ಇದ್ದರೂ ಸಭೆ ನಡೆಸಿದ್ದು ಯಾಕೆ? ಇವರೇನು ಸೂಸೈಡ್ ಬಾಂಬರ್ಗಳ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ದೆಹಲಿಯಲ್ಲಿ ನಿಜಾಮುದ್ದೀನ್ ಸಭೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದರು. ಯಾಕೆ ಹೋಗಿದ್ದರು ಎಂಬುದೆಲ್ಲವನ್ನು ತಿಳಿಯಬೇಕು. ಎಷ್ಟು ಜನರಿಗೆ ಅನುಮತಿ ತೆಗೆದುಕೊಂಡಿದ್ದರು ಎಂಬುದು ಗೊತ್ತಾಗಬೇಕು" ಎಂದಿದ್ದಾರೆ.
"ನಿಜಾಮುದ್ದೀನ್ ಸಮಸ್ಯೆ ಆಗದೇ ಇದ್ದಿದ್ದರೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು. ಆದರೆ ಈಗ ಇದು ಆತಂಕಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ನಾವು ಯಾವುದೇ ರಾಜಕಾರಣ ಮಾಡಬಾರದು" ಎಂದು ಹೇಳಿದ್ದಾರೆ.
"ಧರ್ಮವನ್ನು ಎತ್ತಿಕಟ್ಟುವ ಜನರಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಹುಷಾರಾಗಿರಬೇಕು. ಇದೊಂದು ದೊಡ್ಡ ಪ್ರಕರಣವಾಗಬಾರದು. ಇದನ್ನು ಮಧ್ಯದಲ್ಲಿ ತರಲು ನಾವು ಬಿಡುವುದಿಲ್ಲ. ಸಭೆಗೆ ಹೋದವರು ತಪ್ಪು ಮಾಡಿ ಎಲ್ಲರಿಗೂ ಸಮಸ್ಯೆ ಉಂಟು ಮಾಡಿದ್ದಾರೆ" ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.