ಇಂದೋರ್, ಎ.03 (DaijiworldNews/PY) : ನಗರದಲ್ಲಿ ಕೊರೊನಾ ಶಂಕಿತರ ತಪಾಸಣೆಗೆ ಬುಧವಾರ ತೆರಳಿದ್ದ ತಂಡದ ಮೇಲೆ ಗುಂಪು ದಾಳಿ ದೇಶಾದ್ಯಂತ ಸುದ್ದಿಯಾಗಿದೆ. ದಾಳಿಯ ಸಂದರ್ಭ ಆರೋಗ್ಯ ಕಾರ್ಯಕರ್ತರ ತಂಡದಲ್ಲಿದ್ದ ಡಾ. ಝಕಿಯಾ ಸೈಯದ್ ಅವರಿಗೂ ಗಾಯಗಳಾಗಿದ್ದವು.
ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಕಾರ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಾವು ಕಾರ್ಯನಿರ್ವಹಿಸುತ್ತಿದ್ದೆವು. ಆದರೆ, ನಾವು ಈವರೆಗೆ ಬುಧವಾರ ನಡೆದಂತಂಹ ಘಟನೆಯನ್ನು ನಾವು ನೋಡಿಲ್ಲ. ನಮಗೆ ಗಾಯಗಳಾಗಿವೆ, ಆದರೂ ನಾವು ಕರ್ತವ್ಯ ನಿಭಾಯಿಸಬೇಕಾಗಿದೆ. ನಾವು ಭಯ ಪಡುವುದಿಲ್ಲ ಎಂದು ಡಾ. ಝಕಿಯಾ ತಿಳಿಸಿದ್ದಾರೆ.
ಕೊರೊನಾ ಸೋಂಕಿತರೋರ್ವರ ಸಂಪರ್ಕಕ್ಕೆ ಬಂದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಅವರೊಂದಿಗೆ ನಾವು ಮಾತನಾಡುತ್ತಿದ್ದ ಸಂದರ್ಭ ಸ್ಥಳೀಯರು ಒಮ್ಮಿಂದೊಮ್ಮೆಗೆ ಸಿಟ್ಟುಗೊಂಡು ದಾಳಿ ನಡೆಸಿದ್ದರು ಎಂಬುದಾಗಿ ಘಟನೆ ನಡೆದ ಸಂದರ್ಭ ತಂಡದಲ್ಲಿದ್ದ ವೈದ್ಯರೊಬ್ಬರು ತಿಳಿಸಿದ್ದರು.
ಈ ದಾಳಿಯ ಹಿಂದಿರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಅವರ ವಿರುದ್ದ ಹೇರಲಾಗುವುದು ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.