ಬೆಳಗಾವಿ, ಎ.03 (Daijiworld News/MB) : ದೆಹಲಿಯ ತಬ್ಲಿಗಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಈವರೆಗೆ ಎಲ್ಲರ ವರದಿಯೂ ನೆಗೆಟಿವ್ ಇತ್ತು. ಆದರೆ, ದೆಹಲಿಯ ತಬ್ಲಿಗಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮೂವರಿಗೆ ಪಾಸಿಟಿವ್ ಬಂದಿದೆ. ಅವರಿಗೆ ಬಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಾದ್ಯಂತ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತಾಗಿ ಜಿಲ್ಲಾಡಳಿತದ ಅಧಿಕೃತ ಪ್ರಕಟನೆ ನೀಡಿಲ್ಲ. ಆದರೆ, ರಸ್ತೆಗಳಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗುತ್ತಿದ್ದು ಅಲ್ಲಲ್ಲಿ ಪೊಲೀಸರು ಜನರು ಮನೆಗಳಿಂದ ಬಾರದಂತೆ ಮೈಕ್ಗಳಲ್ಲಿ ಅನೌನ್ಸ್ ಮಾಡುತ್ತಿದ್ದಾರೆ.
ಈ ಮೊದಲು ಗುರುವಾರ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಈ ಕುರಿತಾಗಿ ಮಾತನಾಡಿ, "ದೆಹಲಿಯ ನಿಜಾಮುದ್ದೀನ್ ತಬ್ಲೀಗ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯ ಒಟ್ಟು 62 ಜನರು ಭಾಗವಹಿಸಿದ್ದರು. ಅವರಲ್ಲಿ ಯಾರಿಗೂ ರೋಗದ ಲಕ್ಷಣಗಳು ಕಂಡುಬಂದಿಲ್ಲ. 42 ಜನರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 33 ಮಂದಿಯ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ" ಎಂದು ತಿಳಿಸಿದ್ದರು.