ನವದೆಹಲಿ, ಎ.03 (DaijiworldNews/PY) : ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಎಸ್ಬಿಐ ಕಾರ್ಯವೆಸಗುತ್ತಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕಕರು ಯಾವುದೇ ರೀತಿಯಾದ ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಬಾರದು ಎಂದು ಎಸ್ಬಿಐ ಎಚ್ಚರಿಸಿದೆ.
ಬ್ಯಾಂಕ್ ನೌಕರರು ಬ್ಯಾಂಕ್ ಕಾರ್ಯಗಳ ವಿರುದ್ಧ, ಅದರ ನಿರ್ವಹಣೆ ಮತ್ತು ನೀತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಲ್ಲಾ ಬ್ಯಾಂಕ್ ವಲಯದ ಮುಖ್ಯ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬ್ಯಾಂಕ್ ಶಾಖೆಗಳು ಹಾಗೂ ಕಚೇರಿಗಳು ಕಾರ್ಯವೆಸಗುತ್ತಿರುವುದನ್ನು ವಿರೋಧಿಸಿ ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್ ಹಾಕಿರುವುದನ್ನು ನಾವು ನೋಡಿದ್ದೇವೆ. ಈ ಸಂದಿಗ್ದ ಪರಸ್ಥಿತಿಯಲ್ಲಿ ಬ್ಯಾಂಕ್ನ ಕಾರ್ಯಗಳನ್ನು ಶ್ಲಾಘಿಸಬೇಕಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಅದಾಗಿಯೂ ಬ್ಯಾಂಕ್ ಹಾಗೂ ಅಲ್ಲಿನ ಹಿರಿಯ ಮ್ಯಾನೇಜರ್ ಬಗ್ಗೆ ಅವಮಾನಕರವಾಗಿ ಪೋಸ್ಟ್ ಮಾಡಿದ್ದ ಪಶ್ಚಿಮ ಬಂಗಾಳದ ಇಬ್ಬರು ನೌಕರರ ವಿರುದ್ಧ ಬ್ಯಾಂಕ್ ಕ್ರಮತೆಗೆದುಕೊಂಡಿದೆ.
ಬ್ಯಾಂಕ್ ಈ ರೀತಿಯಾದ ಪ್ರಕಟಣೆ ಹೊರಡಿಸಿರುವ ವಿಚಾರವಾಗಿಯೂ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಎಸ್ಬಿಐ ನೌಕರರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವವಿರುವ ದೇಶದ ಪ್ರಜೆಯಾಗಿರುವ ನನಗೆ ನನ್ನ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸುವ ಹಕ್ಕಿದೆ. ಬ್ಯಾಂಕ್ ಹೊರಡಿಸಿರುವ ಈ ಪ್ರಕಟಣೆಯು ಸಂವಿಧಾನದ 19ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರ ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.