ನವದೆಹಲಿ, ಎ.04 (Daijiworld News/MB) : ದೇಶದ 14 ರಾಜ್ಯಗಳಲ್ಲಿ ತಬ್ಲೀಘಿ ಸಂಘಟನೆಯ ಸಮಾವೇಶದಲ್ಲಿದ್ದು ಈಗ ಸೋಂಕಿಗೆ ಒಳಗಾದವರು ಇದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಶುಕ್ರವಾರ ಈ ಕುರಿತಾಗಿ ಮಾತನಾಡಿದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಕರ್ನಾಟಕ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್, ಅಸ್ಸಾಂ, ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಾಂಡ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕಿತರು ಹರಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಮಾವೇಶದ ಕಾರಣದಿಂದಾಗಿ ಸೋಂಕು ಹೆಚ್ಚಾಗಿ ಹರಡಿದೆ. ಭಾರತದಲ್ಲಿ ಶುಕ್ರವಾರದ ಹೊತ್ತಿಗೆ 2,301 ಪ್ರಕರಣಗಳು ಕಂಡುಬಂದಿದ್ದು ಇವರಲ್ಲಿ 56 ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಒಟ್ಟು ಸೋಂಕಿತರ ಪೈಕಿ 157 ಮಂದಿ ಗುಣಮುಖರಾಗಿದ್ದಾರೆ. ಕೊರೊನಾದ ಪರೀಕ್ಷೆಗೆಂದು ದೇಶದಲ್ಲಿ ಒಟ್ಟು 182 ಪ್ರಯೋಗಾಲಯಗಳನ್ನು ನಿಗದಿಪಡಿಸಲಾಗಿದೆ. ಆ ಪೈಕಿ 130 ಸರ್ಕಾರಿ ಲ್ಯಾಬ್ ಗಳು. ಗುರುವಾರ ಒಟ್ಟು 8 ಸಾವಿರ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಸುಮಾರು 30 ಲಕ್ಷ ಮಂದಿ ಆರೋಗ್ಯ ಸೇತು ಮೊಬೈಲ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶುಕ್ರವಾರ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ದೇಶದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವ ರಾಜ್ಯ ಇದಾಗಿದ್ದು ಇಲ್ಲಿ 423 ಪ್ರಕರಣಗಳು ವರದಿಯಾಗಿದೆ. ಇನ್ನು ತಮಿಳು ನಾಡಿನಲ್ಲಿ ಶುಕ್ರವಾರ ಹೊಸದಾಗಿ 102 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 411ಕ್ಕೇರಿದೆ. ದೆಹಲಿಯಲ್ಲಿ 91 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ 384 ಪ್ರಕರಣಗಳು ವರದಿಯಾಗಿವೆ.