ನವದೆಹಲಿ, ಏ 4 (Daijiworld News/MSP):ಕೊರೊನಾ ವೈರಸ್ ಸೋಂಕು ದೃಢಪಟ್ಟ ವೈದ್ಯೆಯೊಬ್ಬರು ಕೊರೊನಾ ದೃಢಪಟ್ಟ ಮಾರನೇ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯು ಏಮ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವೈದ್ಯರೊಬ್ಬರ ಪತ್ನಿಯಾಗಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಆಪರೇಷನ್ ಮೂಲಕ ಹೆರಿಗೆ ಮಾಡಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವೈದ್ಯರು ಹಾಗೂ ಅವರ ಗರ್ಭಿಣಿ ಪತ್ನಿಯಲ್ಲಿ ಕೊರೊನಾ ಸೋಂಕು ಇರುವುದು ಗುರುವಾರ ಪತ್ತೆಯಾಗಿತ್ತು. ಅವರಿಬ್ಬರನ್ನು ಪತ್ಯೇಕ ವಾರ್ಡ್ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಗುವಿಗೆ ಜನ್ಮ ನೀಡಿದ 29 ವರ್ಷದ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದ ಪ್ರತ್ಯೇಕ ವಾರ್ಡ್ ಅನ್ನು ಆಪರೇಷನ್ ಥಿಯೇಟರ್ ಆಗಿ ಪರಿವರ್ತಿಸಲಾಗಿದ್ದು, ಈ ಬಗ್ಗೆ ನಿಗಾ ಇಡಲು 10 ವೈದ್ಯರ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಮಗುವನ್ನು ತಾಯಿಯೊಂದಿಗಿರಲು ಬಿಡಲಾಗಿದೆ. ಶಿಶುವಿಗೆ ಹಾಲುಣಿಸುವ ಅಗತ್ಯವಿರುತ್ತದೆ. ಇಲ್ಲಿಯವರೆಗೆ, ಸ್ತನ್ಯಪಾನದ ಮೂಲಕ ಕೊರೊನಾ ಸೋಂಕು ಹರಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ . ಕೊರೊನಾ ಸೋಂಕು ಹೊಂದಿರುವ ಮಹಿಳೆಯರು ತೀರಾ ಅವಶ್ಯಕತೆ ಇದ್ದಲ್ಲಿ ತಮ್ಮ ಮಗುವಿಗೆ ಹಾಲುಣಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.