ಬಾಗಲಕೋಟೆ, ಎ.04 (Daijiworld News/MB) : ಶುಕ್ರವಾರ ಕೊರೊನಾ ಸೋಂಕಿಗೆ ಬಲಿಯಾದ ಬಾಗಲಕೋಟೆಯ 75 ವರ್ಷದ ವೃದ್ಧನ ಶವವನ್ನು ತಡರಾತ್ರಿ ಕುಟುಂಬದ ಸದಸ್ಯರು ಇಲ್ಲದೆಯೇ ರೈಲು ನಿಲ್ದಾಣ ಸಮೀಪದ ರುದ್ರಭೂಮಿಯಲ್ಲಿ ಹೂಳಲಾಯಿತು.
ಕುಟುಂಬದ ಎಲ್ಲಾ ಸದಸ್ಯರನ್ನು ಕೊರೊನಾ ಸೋಂಕು ಶಂಕೆಯಿಂದಾಗಿ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್ನಲ್ಲಿ ಇರಿಸಲಾಗಿದ್ದು ಈ ಕಾರಣದಿಂದಾಗಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ತಡರಾತ್ರಿ ಒಂದು ಗಂಟೆಗೆ ಶವ ಸಂಸ್ಕಾರ ನೆರವೇರಿಸಿದರು.
ಶವ ಸಂಸ್ಕಾರಕ್ಕೂ ಮೊದಲು ಹೈಡ್ರೊಕ್ಲೊರೈನ್ ದ್ರಾವಣ ಸಿಂಪಡಿಸಿ ಸೋಂಕು ಹರಡದಂತೆ ಜಾಗೃತಿ ವಹಿಸಲಾಗಿದ್ದು ಸಿಬ್ಬಂದಿ ತಲಾ ಎರಡೆರಡು ಸ್ವಯಂ ರಕ್ಷಣೆ ಕವಚಗಳನ್ನು ಧರಿಸಿ ಶವದ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡರು ಎಂದು ವರದಿ ತಿಳಿಸಿದೆ.