ಬೆಂಗಳೂರು, ಏ 4 (Daijiworld News/MSP): 'ನನ್ನ ಹಾಗೂ ಶ್ರೀರಾಮುಲು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ನಾನು ಮತ್ತು ಶ್ರೀರಾಮುಲು ಅಣ್ಣ-ತಮ್ಮಂದಿರಂತೆ ಇದ್ದೇವೆ. ಇಬ್ಬರೂ ಒಂದಾಗಿ ರಾಜ್ಯದ ಜನರಿಗಾಗಿ ಶ್ರಮಿಸುತ್ತಿದ್ದೇವೆ' ಎಂದು ಸಚಿವ ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಅಸಮಾಧಾನವಿದೆ ಎಂಬ ವದಂತಿ ಬಗ್ಗೆ, ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು" ನನ್ನ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೊನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಮತ್ತು ಶ್ರೀರಾಮುಲು ಅವರು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ" ಎಂದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ "ರಾಜ್ಯದಲ್ಲಿ ಕೊರೋನಾದಿಂದ ಸಾವಿನ ಆತಂಕ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿಗಳಿವೆ. ಈ ಸುಳ್ಳು ಸುದ್ದಿಗಳ ಹಿಂದೆ ನೀಚ ರಾಜಕಾರಣದ ಷಡ್ಯಂತ್ರವಿದೆ" ಎಂದು ಡಾ. ಸುಧಾಕರ್ ಅಸಮಾಧಾನ ಹೊರಹಾಕಿದ್ದಾರೆ.