ರಾಯಚೂರು, ಎ.04 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ಒಂದು ದಿನದ ಸಂಬಳ ಕಡಿತಗೊಳಿಸಲಾಗುವುದು. ಇದನ್ನು ಯಾರದರೂ ನಿರಾಕರಿಸುವುದಿದ್ದಲ್ಲಿ ತಿಳಿಸಿ ಎಂದು ಸರ್ಕಾರ ಹೇಳಿದ್ದು ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ನಿರಾಕರಣೆಯ ಕುರಿತಾಗಿ ಪತ್ರ ಬರೆದಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಠಾಣಾ ಪಿಎಸ್ಐ ಮೂಲಕ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನಿರಾಕರಿಸಿ ಪತ್ರ ಬರೆದಿದ್ದಾರೆ.
ಮಾರ್ಚ್ ತಿಂಗಳ ಒಂದು ದಿನದ ಸಂಬಳವನ್ನು ನೀಡುವಂತೆ ಸರ್ಕಾರ ಹೇಳಿದೆ. ಆದರೆ ನಾವು ಯಾವುದೇ ಸೌಲಭ್ಯಗಳು ಇಲ್ಲದೇ ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ರಜೆಯೂ ಇಲ್ಲದೆ ಹಗಳಿರುಳು ದುಡಿಯುತ್ತಿದ್ದೇವೆ. ಯಾರೂ ಕೂಡಾ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಸಹಾಯ ಮಾಡಿಲ್ಲ. ಆದರೆ ತೆಲಂಗಾಣ ಸರ್ಕಾರ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷಣೆಯೊಂದಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನ ಮಾಡಿದೆ. ನೀವು ಲಾಕ್ಡೌನ್ ಕಾರಣದಿಂದಾಗಿ ಮನೆಯಲ್ಲೇ ಇರುವ ವಿವಿಧ ಇಲಾಖೆ ಅಧಿಕಾರಿಗಳ ಸಂಬಳ ಬೇಕಾದ್ದಲ್ಲಿ ಕಡಿತ ಮಾಡಿ ಆದರೆ ನಮ್ಮ ಸಂಬಳ ಕಡಿತ ಮಾಡಬೇಡಿ ಎಂದು ತಿಳಿಸಿದ್ದಾರೆ.
ರಾಯಚೂರು ಮಾತ್ರವಲ್ಲದೆ ಹಾವೇರಿ ಸೇರಿದಂತೆ ಹಲವಾರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ತಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ನಿರಾಕರಿಸಿದ್ದಾರೆ.