ನವದೆಹಲಿ, ಏ 4 (Daijiworld News/MSP): ಕೊರೊನಾ ವೈರಸ್ ಹರಡದಂತೆ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಏಪ್ರಿಲ್ 14 ರ ನಂತರವೂ ಮುಂದುವರೆಯುವ ಸಾಧ್ಯತೆ ಇದೆ.
ಏಪ್ರಿಲ್ 14 ರ ಬಳಿಕ ಗ್ರಾಹಕರು ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಹೇಳಿದ್ದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಇದೀಗ ದಿಢೀರ್ ಆಗಿ ತನ್ನ ನಿರ್ಧಾರದ ಬದಲಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಏ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಏ.೧೪ ರ ಬಳಿಕ ಟಿಕೆಟ್ ಮುಂಗಡ ಕಾಯ್ದಿರಿಸಬಹುದು ಎಂದಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಇದೀಗ ಏ.30ರವರೆಗೂ ವಿಸ್ತರಿಸಿದೆ.
ಇದು ಲಾಕ್ ಲೌನ್ ಅವಧಿಯ ಬಳಿಕವೂ ಮತ್ತೆ ಒಂದು ವಾರದ ಅವಧಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತಷ್ಟು ದಿನಗಳ ಕಾಲ ಎಲ್ಲಾ ರೀತಿಯ ವಿಮಾನಯಾನ ಸೇವೆಗಳನ್ನು ನಿಷೇಧಿಸಬಹುದು ಎಂಬ ವದಂತಿಗಳು ಹರಡಲು ಆರಂಭವಾಗಿದೆ.
ಈ ಕುರಿತು ಏರ್ ಇಂಡಿಯಾ ವಕ್ತಾರ ಮಾತನಾಡಿ, ಏಪ್ರಿಲ್ 14 ರ ಬಳಿಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವುದನ್ನು ಕಾಯುತ್ತಿದೆ. ಹೀಗಾಗಿ ಏಪ್ರಿಲ್ 3 ರಿಂದ ಏಪ್ರಿಲ್ 30 ರವರೆಗೂ ಎಲ್ಲಾ ವಿಮಾನ ಬುಕ್ಕಿಂಗ್ ಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.