ಮೈಸೂರು, ಎ.04 (Daijiworld News/MB) : ದೀಪ ಹಚ್ಚಿದರೆ ವೈರಸ್ ದೀಪದ ಬಳಿಗೆ ಬಂದು ದೀಪದ ಶಾಖಕ್ಕೆ ಸಾಯುತ್ತದೆ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.
ದೀಪದ ಕುರಿತಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ದೀಪ ಬೆಳಗುವಂತೆ ಮೋದಿಯವರು ತಿಳಿಸಿದ್ದು ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಆ ಕಾರಣದಿಂದಾಗಿ ದೇಶಾದಾದ್ಯಂತ ದೀಪ ಹಚ್ಚುವಂತೆ ಹೇಳಿದ್ದಾರೆ ಎಂದರು.
ಕತ್ತಲು ಇದ್ದ ಸಂದರ್ಭದಲ್ಲಿ ನಾವು ದೀಪ ಹಚ್ಚಿದರೆ ವೈರಸ್ ಎಲ್ಲೇ ಇದ್ದರೂ ದೀಪದ ಬಳಿಗೆ ಬರುತ್ತದೆ. ದೀಪದ ಶಾಖಕ್ಕೆ ಸಾಯುತ್ತದೆ. ಮೋದಿಯವರು ನಮ್ಮ ಮನೆಯಲ್ಲಿ ವೈರಸ್ ಇರಬಾರದು ಎಂದು ನಿರ್ಧಾರಿಸಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಡಲು ತಿಳಿಸಿದ್ದಾರೆ ಎಂದರು.
ಹಾಗೆಯೇ ಶಾಸಕರು ಮೈಸೂರಿನ ಎಂಜಿ ಮಾರುಕಟ್ಟೆಯಲ್ಲಿ ಕ್ಯಾಂಡಲ್, ಮಾಸ್ಕ್ ಹಾಗೂ ದೀಪ ವಿತರಣೆ ಮಾಡಿದ್ದು ಮುಗಿಬಿದ್ದ ಜನರನ್ನು ಕೂಡಲೇ ಪೊಲೀಸರು ಚದುರಿಸಿದರು.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಲೈವ್ ಬಂದಿದ್ದು ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಆಫ್ ಮಾಡಿ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿ ಎಂದು ಜನತೆಗೆ ಕರೆ ನೀಡಿದ್ದಾರೆ.