ನವದೆಹಲಿ, ಏ 4 (Daijiworld News/MSP): ಅಮೆರಿಕದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಭಾರತದಲ್ಲಿ ಕೊರೊನಾ ವಿರುದ್ದ ನಿಯಂತ್ರಣ ಸಾಧಿಸಬೇಕಾದರೆ ಸೆಪ್ಟೆಂಬರ್ ಮೊದಲ ವಾರದವರೆಗಿನ ಲಾಕ್ ಡೌನ್ ಬೇಕಾಗಬಹುದು ಎಂದು ಅಮೆರಿಕದ ಸಂಸ್ಥೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಎಸ್ಜಿ) ಅಭಿಪ್ರಾಯಪಟ್ಟಿದೆ.
ಭಾರತ ಮಾತ್ರವಲ್ಲದೆ ಪ್ರಮುಖ ದೇಶಗಳ ಲಾಕ್ ಡೌನ್ ಪರಿಸ್ಥಿತಿ ಮತ್ತಿ ಹಿಂಪಡೆಯಬಹುದಾದ ಸಂಭಾವ್ಯ ಸಮಯದ ಬಗ್ಗೆ ಈ ಅಧ್ಯಯನ ವರದಿ ವಿವರಿಸಿದೆ. ಈ ವರದಿ ಪ್ರಕಾರ ಭಾರತದಲ್ಲಿ ಲಾಕ್ ಡೌನ್ ಅನ್ನು ಸರ್ಕಾರ ಜೂನ್ ನಾಲ್ಕನೇಯ ವಾರ ಅಥವಾ ಸೆಪ್ಟೆಂಬರ್ ಎರಡನೇ ವಾರದ ನಡುವೆಯಷ್ಟೇ ಹಿಂಪಡೆಯಬಹುದು ಎಂದಿದೆ.
ಲಾಕ್ ಡೌನ್ ಯಾಕೆ ಮುಂದುವರಿಸಬೇಕಾದಿತು ಎಂಬುದಕ್ಕೆ ಈ ಸಂಸ್ಥೆ ಹಲವಾರು ಕಾರಣಗಳನ್ನ ನೀಡಿದೆ. ಭಾರತದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ಎಷ್ಟು ಸಮರ್ಪಕವಾಗಿ ಅನುಷ್ಠಾನವಾಗಬಹುದು ಎಂಬುದನ್ನು ಪರಿಗಣಿಸಿ ಒಂದು ಅಂದಾಜಿಗೆ ಬಂದಿದೆ. ಈ ಸಂಸ್ಥೆಯ ಪ್ರಕಾರ, ಜೂನ್ 3ನೇ ವಾರದಂದು ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
ಇಂದಿನವರೆಗೆ ಭಾರತದಲ್ಲಿ 68 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮಾತ್ರವಲ್ಲದೆ 2,900ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅಮೆರಿಕ, ಇಟಲಿ, ಸ್ಪೇನ್, ಬ್ರಿಟನ್ ಮೊದಲಾದ ದೇಶಗಳಿಗೆ ಹೋಲಿಕೆ ಭಾರತದಲ್ಲಿ ಅನಾಹುತ ಕಡಿಮೆ ಎಂಬುದು ಕಂಡರೂ ಭಾರತದಲ್ಲಿ ವ್ಯಾಪಕ ಪರೀಕ್ಷೆ ನಡೆಯುತ್ತಿಲ್ಲ. ಪರೀಕ್ಷಾ ಕಿಟ್ಗಳ ಹಾಗೂ ವೈದ್ಯಕೀಯ ಮೂಲಸೌಕರ್ಯ ಕಡಿಮೆ ಇರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.