ಮುಂಬೈ, ಎ.04 (Daijiworld News/MB) : ಭಾನುವಾರ ರಾತ್ರಿ 9 ಗಂಟೆಗೆ ಎಲ್ಲರೂ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ, ರಾತ್ರಿ 9ಕ್ಕೆ ಸರಿಯಾಗಿ ಮನೆಯ ಮಹಡಿಯ ಮೇಲೆ ಅಥವಾ ಮನೆಯಿಂದ ಮುಂದೆ ನಿಂತು 9 ನಿಮಿಷಗಳ ವರೆಗೂ ಮೇಣದ ಬತ್ತಿ ಅಥವಾ ದೀಪ ಬೆಳಗಬೇಕು. ಒಂದೇ ಸಮಯಕ್ಕೆ ದೇಶದ ಎಲ್ಲರೂ ಪ್ರಕಾಶವನ್ನು ಬೆಳಗುವ ಮೂಲಕ ಜೊತೆಯಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಸಾರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಒಮ್ಮೆಗೆ ಎಲ್ಲಾ ಕಡೆಗಳಲ್ಲಿ 9 ನಿಮಿಷಗಳ ಕಾಲ ಲೈಟ್ ಆಫ್ ಮಾಡುವುದರಿಂದ ತೊಂದರೆ ಉಂಟಾಗುತ್ತದೆ ಎಂದು ತಜ್ಷರು ಹೇಳಿದ್ದಾರೆ.
ಒಮ್ಮೆಗೆ ಎಲ್ಲಾ ಕಡೆಗಳಲ್ಲಿ ವಿದ್ಯುತ್ ಆಫ್ ಮಾಡಿದಾಗ ವಿದ್ಯುತ್ ಪವರ್ ಗ್ರಿಡ್ನಲ್ಲಿನ ಜನರೇಟರ್ ಹಾಗೂ ಟ್ರಾನ್ಸ್ ಫಾರ್ಮರ್ಗಳಿಗೆ ಹಾನಿಯಾಗಲಿದೆ. ಇದನ್ನು ಸರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಲಿದೆ. ಇನ್ನು ವಿದ್ಯುತ್ ಸ್ಥಗಿತದಿಂದಾಗಿ ಆಗುವ ತಾಂತ್ರಿಕ ತೊಂದರೆ ತಡೆಗೆ ಯಾವುದೇ ಸಿದ್ಧತೆಗಳು ಆರಂಭವಾಗಿಲ್ಲ. ಈಗಾಗಲೇ ಲಾಕ್ಡೌನ್ ಕಾರಣದಿಂದಾಗಿ ದೇಶದ ಎಲ್ಲಾ ಕೈಗಾರಿಕಾ ಕಾರ್ಖಾನೆಗಳು, ಮಾಲ್, ಸಿನಿಮಾ ಸೇರಿ ಬಹುತೇಕ ಸಂಸ್ಥೆಗಳು ಬಂದ್ ಆಗಿದೆ. ಹಾಗಿರುವಾಗ ಒಂದೇ ಬಾರಿಗೆ ಎಲ್ಲ ಮನೆಗಳಲ್ಲಿಯೂ ಲೈಟ್ ಆಫ್ ಮಾಡಿದರೆ ಟ್ರಿಪ್ ಆಗಿ ಪವರ್ ಆಫ್ ಆಗಿ ಫವರ್ ಗ್ರಿಡ್ ಮೇಲೆ ಹೆಚ್ಚಿನ ಶಕ್ತಿ ಪೂರೈಕೆಯಾಗಿ ಹಾನಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ತಜ್ಷರು ಹೇಳುತ್ತಾರೆ.
ವಿದ್ಯುತ್ ಕನಿಷ್ಠ ಶೇ.30 ಪೂರೈಕೆ ಆಗುತ್ತಿರಬೇಕು ಹಾಗೂ ಉತ್ಪಾದನೆ ತಗ್ಗಿಸಿಕೊಳ್ಳಬೇಕು. ವಿದ್ಯುತ್ ಉತ್ಪಾದನಾ ಘಟಕದಲ್ಲಿನ ಟ್ರಾನ್ಸ್ಫಾರ್ಮರ್ಗಳು 12 ಪಾಯಿಂಟ್ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅವುಗಳನ್ನು 4-5 ಪಾಯಿಂಟ್ಗಳಿಗೆ ಇಳಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ತೊಂದರೆ ಉಂಟಾಗುತ್ತದೆ.
ಪ್ರತಿದಿನ 7 ರಿಂದ 9 ಗಂಟೆಯ ಅವಧಿ ಪಿಕ್ ಲೋಡ್ ಅವಧಿಯಾಗಿರುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ನೀಡಲಾಗುತ್ತದೆ. ಹಾಗಿರುವಾಗ ಒಮ್ಮೆಲೆ 9 ಗಂಟೆಗೆ ಪೀಕ್ ಲೋಡ್ನಿಂದ ಕಡಿಮೆಯಾಗಬೇಕಾಗುತ್ತದೆ. ಇದರಿಂದಾಗಿ ತೊಂದರೆಯಾಗುತ್ತದೆ ಎಂಬುದು ತಜ್ಷರ ಅಭಿಪ್ರಾಯ.
ಇನ್ನು 9 ನಿಮಿಷಗಳ ಕಾಲ ಲೈಟ್ ಆಫ್ ಮಾಡಿ ಮೊಂಬತ್ತಿ ಬೆಳಗುವಂತೆ ಪ್ರಧಾನಿ ನೀಡಿದ ಕರೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವತ್, ತುರ್ತು ಸೇವೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದಾಗಿ ಲೈಟ್ ಆರಿಸಬೇಡಿ ಎಂದು ಹೇಳಿದ್ದಾರೆ.
ನಾವು ನಮ್ಮ ಮನೆಯಲ್ಲಿ ವಿದ್ಯುತ್ ಆರಿಸುವ ಮೊದಲು ಯೋಚನೆ ಮಾಡಬೇಕು. ಇದು ಗ್ರಿಡ್ ವೈಫಲ್ಯಕ್ಕೆ ಕಾರಣವಾಗಿ ತುರ್ತುಸೇವೆಗಳಿಗೆ ತೊಂದರೆಯಾಗಬಹುದು. ಎಲ್ಲರೂ ಏಕಕಾಲದಲ್ಲಿ ವಿದ್ಯುತ್ ದೀಪಗಳನ್ನು ಆರಿಸುವುದರಿಂದ ಬೇಡಿಕೆ ಹಾಗೂ ಪೂರೈಕೆಯ ನಡುವೆ ದೊಡ್ಡ ಅಂತರ ಉಂಟಾಗುತ್ತದೆ. ಲಾಕ್ಡೌನ್ ಪರಿಣಾಮದಿಂದಾಗಿ ಈಗಾಗಲೇ 23,000 ಮೆಗಾವ್ಯಾಟ್ನಿಂದ 15,000 ಮೆಗಾವ್ಯಾಟ್ಗೆ ಕುಸಿದಿದೆ. ಹೀಗಿರುವಾಗ ಎಲ್ಲಾ ಕಡೆ ವಿದ್ಯುತ್ ಆಫ್ ಆದಾಗ ಬ್ಲ್ಯಾಕ್ಔಟ್ ಆಗಿ ತುರ್ತು ಸೇವೆಗಳಿಗೆ ತೊಂದರೆಯಾಗಬಹುದು. ಮತ್ತೆ ಹಿಂದಿನ ಸ್ಥಿತಿಗೆ ಬರಲು ಕನಿಷ್ಠ 12 ರಿಂದ 16 ಗಂಟೆಗಳು ಬೇಕಾಗಬಹುದು. ಕೊರೊನಾ ವಿರುದ್ಧ ನಾವು ಹೋರಾಡಬೇಕಾದರೆ ವಿದ್ಯುತ್ ಶಕ್ತಿ ಅತೀ ಮುಖ್ಯ ಎಂದಿದ್ದಾರೆ.