ಬೆಂಗಳೂರು, ಏ 4 (Daijiworld News/MSP): ರೇಷನ್ ಕಾರ್ಡ್ ಇಲ್ಲದವರಿಗೂ ಪಡಿತರ ಪೂರೈಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿರುವುದರಿಂದ ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ಆಹಾರ ಸಮಸ್ಯೆ ಕಾಡುತ್ತಿದ್ದು ಈ ನಿಟ್ಟಿನಲ್ಲಿ ಜನರು ಹಸಿವಿನಿಂದ ಪರಿತಪಿಸಬಾರದು ಎಂದು ಪಡಿತರ ಚೀಟಿ ಇಲ್ಲದವರಿಗೂ ಪಡಿತರ ನೀಡುವಂತೆ ಸಿಎಂ ತಿಳಿದ್ದಾರೆ.
ಬೆಂಗಳೂರು ಶಾಸಕರು, ಸಂಸದರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಡಿತರ ಚೀಟಿ ಇಲ್ಲದ ಬಡವರಿಗೆ ಆಹಾರ ಧಾನ್ಯ ನೀಡಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಕ್ಷಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಎಲ್ಲ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಪಡಿತರ ಚೀಟಿ ಇಲ್ಲದಿರುವ ಬಡವರು ಕೂಡ ಸಂಬಂಧಪಟ್ಟ ಇಲಾಖೆಗಳಲ್ಲಿ ಹೋಗಿ ನಾಳೆಯಿಂದ ಆಹಾರ ಧಾನ್ಯಗಳನ್ನು ಪಡೆಯಬಹುದು. ಆದರೆ ಯಾರು ಲಾಕ್ ಡೌನ್ ಮಾತ್ರ ಉಲ್ಲಂಘಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು.ರಾಜ್ಯದ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರು ಯಾರೂ ಕೂಡ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.