ನವದೆಹಲಿ, ಎ.04 (DaijiworldNews/PY) : "ಕೊರೊನಾ ವೈರಸ್ ವಿಚಾರವಾಗಿ ಪಕ್ಷದ ಯಾವುದೇ ನಾಯಕರು ಪ್ರಚೋದನಾತ್ಮಕ ಅಥವಾ ವಿಭಜನಾತ್ಮಕ ಹೇಳಿಕೆ ನೀಡಬಾರದು" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಗುರುವಾರ ಸಂಜೆ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, "ಕೊರೊನಾ ವೈರಸ್ಗೆ ಯಾವುದೇ ಕೋಮು ಬಣ್ಣ ನೀಡದಂತೆ ಯಾವುದೇ ವಿಭಜನೆ ಹಾಗೂ ವ್ಯತ್ಯಾಸವನ್ನು ಸೃಷ್ಟಿಸಿರುವುದರಿಂದ ದೂರವಿರಿ" ಎಂದು ತನ್ನ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.
"ಪ್ರಚೋದನಾತ್ಮಕ ಅಥವಾ ವಿಭಜನಾತ್ಮಕ ಹೇಳಿಕೆಯನ್ನು ಪಕ್ಷದ ಯಾವುದೇ ನಾಯಕರು ನೀಡಬಾರದು. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಆ ರಾಜ್ಯದ ಸರ್ಕಾರಗಳಿಗೆ ಹಾಗೂ ಪ್ರಧಾನಮಂತ್ರಿಗಳ ಪ್ರಯತ್ನಕ್ಕೆ ಬೆಂಬಲ ನೀಡಬೇಕು" ಎಂದು ಹೇಳಿದರು.
"ದೆಹಲಿಯ ನಿಝಾಮುದ್ದೀನ್ನಲ್ಲಿ ನಡೆದ ತಬ್ಲೀಗಿ ಜಮಾಅತ್ ಸಭೆಯ ವಿಚಾರ ಬಂದಾಗಲೂ ಇದನ್ನು ಪುನರುಚ್ಚರಿಸಲಾಯಿತು. ಈ ವಿಚಾಋವನ್ನು ಯಾರೂ ಕೊಮುವಾದಿ ವಿಚಾರವನ್ನಾಗಿ ಮಾಡಬಾರದೆಂಬ ನಿರ್ದೇಶನವಿದೆ. ಈ ಕುರಿತು ಅಲ್ಪ ಸಂಖ್ಯಾತ ಮುಖಂಡರು ಮಾತ್ರ ಅವರು ಬಯಸಿದರೆ ಹೇಳಿಕೆ ನೀಡಬಹುದು. ನಾವೆಲ್ಲರೂ ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಒಗ್ಗಟ್ಟಿನಿಂದ ಇರಬೇಕು" ಎಂದು ತಿಳಿಸಿದರು.
ದೆಹಲಿಯ ನಿಝಾಮುದ್ದೀನ್ನಲ್ಲಿ ನಡೆದ ತಬ್ಲೀಗಿ ಜಮಾಅತ್ ಸಭೆಯ ವಿಚಾರವನ್ನು ಬಿಜೆಪಿ ಪಕ್ಷದ ಹೆಚ್ಚಿನ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಜಿಹಾದ್ ಹಾಗೂ ಮರ್ಕಝ್ ಪಿತೂರಿ ಎಂದು ಕರೆಯುವ ಮೂಲಕ ವಿವಾದ ಸೃಷ್ಠಿಸಿದ್ದರು.