ಬೆಂಗಳೂರು, ಎ.04 (DaijiworldNews/PY) : "ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಯಾರೂ ಸಹ ವೆಂಟಿಲೇಟರ್ನಲ್ಲಿ ಇಲ್ಲ. ಆಕ್ಸಿಜನ್ ಇಬ್ಬರಿಗೆ ಮಾತ್ರ ನೀಡಲಾಗಿದೆ" ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಶಾಸಕರು, ಸಚಿವರು, ಸಂಸದರ, ಬಿಬಿಎಂಪಿ ಸದಸ್ಯರನ್ನು ಒಳಗೊಂಡ ಸಭೆಯ ಬಳಿಕ ಮಾತನಾಡಿದ ಅವರು, "ಇದುವರೆಗೆ ರಾಜ್ಯದಲ್ಲಿ 128 ಮಂದಿಗೆ ಕೊರೋನಾ ಸೊಂಕು ತಗುಲಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 11 ಮಂದಿ ಡಿಸ್ ಚಾರ್ಜ್ ಆಗಿದ್ದಾರೆ" ಎಂದರು.
"ಪೊಲೀಸ್ ಇಲಾಖೆಗೆ ರಾಜ್ಯದಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆಯಾಗಿಲ್ಲ. ರಾಜ್ಯಾದ್ಯಂತ 480 ಹಾಪ್ ಕಾಮ್ಸ್ ಮೂಲಕ ರೈತರಿಂದ ಹಣ್ಣು ತರಕಾರಿ ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದರು.
"ಹಿರಿಯ ಸಚಿವರ ನೇತೃತ್ವದಲ್ಲಿ ಕೊರೊನಾ ಸಂಬಂಧ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಪಡಿತರ ಚೀಟಿದಾರರಿಗೆ ಮುಂಗಡವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕಾರ್ಡ್ ಹೊಂದಿರದವರಿಗೂ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪಕ್ಷಬೇದ ಇಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುವ ವಿಚಾರವಾಗಿ ಚರ್ಚೆ ನಡೆದಿದೆ" ಎಂದರು.
"ವಾರ್ ಈಗಾಗಲೇ 24 ಗಂಟೆ ಕೆಲಸ ಮಾಡ್ತಾ ಇದೆ. ವಿಪಕ್ಷಗಳು ಸರ್ಕಾರದ ಕೆಲಸಕ್ಕೆ ಶ್ಲಾಘನೆ ಮಾಡಿದ್ದಾರೆ. ಮನೆಯಿಂದ ಯಾರು ಹೊರ ಬರಬಾರದು. ಖಾಸಗಿ ಕ್ಲಿನಿಕ್ ತೆರೆಯಬೇಕು. ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ" ಎಂದು ಹೇಳಿದರು.
"ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗಾಗಿ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ 650 ಬೆಡ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ವಸ್ತುಗಳಿಗೆ ರಾಜ್ಯದಲ್ಲಿ ಯಾವುದೇ ಕೊರತೆಯಿಲ್ಲ. ಅನಗತ್ಯ ಗೊಂದಲ ಮಾಡಿಕೊಂಡು ಜನರ ದುಂಬಾಲು ಬೀಳುವುದು ಬೇಡ" ಎಂದು ತಿಳಿಸಿದರು.
"ಕೊಳಗೇರಿ ಪ್ರದೇಶದ ಜನರಿಗೆ ಉಚಿತವಾಗಿ ಹಾಲು ಸರಬರಾಜು ಮಾಡಲಾಗುತ್ತಿದೆ. ಹಣ್ಣು ತರಕಾರಿ ಮಾರಾಟಕ್ಕೆ ಸಂಚಾರಿ ಹಾಪ್ ಕಾಮ್ಸ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ಅನಗತ್ಯವಾಗಿ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡದಂತೆ ಮನವಿ ಮಾಡಿದರು. ರಾಜ್ಯದಲ್ಲಿ 17 ಸಹಾಯವಾಣಿ ಪ್ರಾರಂಭಿಸಲಾಗಿದೆ. ಅಸಂಘಟಿತ ಕಾರ್ಮಿಕರು ಮತ್ತು ವಲಸಿಗರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು.