ನವದೆಹಲಿ, ಎ.04 (DaijiworldNews/PY) : 21 ದಿನಗಳ ಲಾಕ್ಡೌನ್ ನಂತರ ಎ.15ರಿಂದ ರೈಲು ಸಂಚಾರ ಪುನರಾರಂಭಿಸಲು ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಎ.15ರಂದು ಸುರಕ್ಷತಾ ಸಿಬ್ಬಂದಿ, ಚಾಲಕರು, ಗಾರ್ಡ್ಗಳು, ಟಿಟಿಇ ಮತ್ತು ಇತರ ಸಿಬ್ಬಂದಿಗೆ ಕರ್ತವ್ಯಕ್ಕೆ ವಾಪಾಸ್ಸಾಗುವಂತೆ ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅದಾಗಿಯೂ, ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕ ನಂತರವಷ್ಟೇ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ. ಎಲ್ಲಾ ವಲಯಗಳಲ್ಲಿ ಸಂಚಾರ ಪುನರಾರಂಭಿಸಲು ಸಂಬಂಧಿಸಿದ ಕ್ರಿಯಾಯೋಜನೆ ಸಿದ್ದಪಡಿಸಲಾಗುತ್ತಿದೆ. ಕಾರ್ಯಾಚರಣೆಗೆ ಸಿದ್ದವಾಗಿರುವಂತೆ ಎಲ್ಲಾ17 ವಲಯಗಳಿಗೂ ಸೂಚಿಸಲಾಗಿದೆ. ಎಲ್ಲಾ ವಲಯಗಳಿಗೂ ವಾರದ ಒಳಗಾಗಿ ಕ್ರಿಯಾಯೋಜನೆ ಕಳುಹಿಸಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಎ.15ರಿಂದಲೇ ರಾಜಧಾನಿ, ಶತಾಬ್ಧಿ, ತುರಂತೋ ಸೇರಿದಂತೆ ಶೇ 80ರಷ್ಟು ರೈಲುಗಳು ಸಂಚಾರ ಪುನರಾರಂಭಿಸುವ ನಿರೀಕ್ಷೆ ಇದ್ದು, ಸ್ಥಳೀಯ ರೈಲುಗಳೂ ಸಂಚರಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮಾ.24ರಂದು ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಿದ್ದರು. ಹಾಗಾಗಿ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆ.