ಮಹಾರಾಷ್ಟ್ರ, ಎ.04 (Daijiworld News/MB) : ಕೊರೊನಾ ವೈರಸ್ನಂತೆಯೇ ಕೋಮುವಾದದ ವೈರಸ್ ಕೂಡಾ ಇದೆ. ಕೆಲವರು ತಮಾಷೆ ಮಾಡಲು ಸುಳ್ಳು ಸಂದೇಶ, ತಪ್ಪು ಮಾಹಿತಿ ಇರುವ ಸಂದೇಶ ವಿಡಿಯೋಗಳನ್ನು ರವಾನೆ ಮಾಡುತ್ತಾರೆ. ಅವರಿಗೆ ಅಂತಿಮವಾಗಿ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಾಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕೊರೊನಾ ಯಾವುದೇ ಜಾತಿ ಧರ್ಮ ನೋಡಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿಯೂ ದೆಹಲಿಯಲ್ಲಿ ನಡೆದ ತಬ್ಲಿಗಿ ಜಮಾತ್ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ದೆಹಲಿಯಲ್ಲಿ ನಡೆದ ಘಟನೆ ನಮ್ಮ ಕಣ್ಣ ಮುಂದೆ ಇದ್ದು ಈ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ತೆರಳಿದ್ದ ವ್ಯಕ್ತಿಗಳನ್ನು ಸಂಬಂಧಪಟ್ಟ ಸಂಸ್ಥೆಯವರು, ಸಂಘಟಕರು ಪತ್ತೆ ಹಚ್ಚಿಕೊಡಬೇಕು ಎಂದು ಮುಖ್ಯಮಂತ್ರಿ ಠಾಕ್ರೆ ತಿಳಿಸಿದ್ದಾರೆ.