ನವದೆಹಲಿ, ಎ.04 (DaijiworldNews/PY) : ಜನರು ಏಕಕಾಲದಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ, ಉರಿಸುವುದರಿಂದ ತಂತಿಗಳಲ್ಲಿ ಅಸ್ಥಿರತೆ, ವೋಲ್ಟೇಜ್ನಲ್ಲಿ ವ್ಯತ್ಯಾಸವಾಗಬಹುದೆಂಬ ವಿಚಾರಕ್ಕೆ ಆತಂಕಪಡಬೇಕಾಗಿಲ್ಲ ಎಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.
ಎ.5ರಂದು ಕೊರೊನಾ ವಿರುದ್ದ ದೇಶ ಒಗ್ಗೂಡಿರುವುದರ ಸಂಕೇತವಾಗಿ ರಾತ್ರಿ 9ರಿಂದ 9:09ರವರೆಗೆ ಸ್ವಯಂಪ್ರೇರಿತರಾಗಿ ಜನರು ವಿದ್ಯುತ್ ದೀಪಗಳನ್ನು ಆರಿಸಿ ದೀಪ, ಮೇಣದ ಬತ್ತಿ, ಟಾರ್ಚ್ ಅಥವಾ ಮೊಬೈಲ್ ಫ್ಲಾಶ್ಲೈಟ್ ಬೆಳಗುವಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು, ಇದಕ್ಕೆ ಪ್ರತಿಪಕ್ಷಗಳ ನಾಯಕರು ಸೇರಿದಂತೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು.
ಏಕ ಕಾಲದಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯುತ್ ದೀಪಗಳನ್ನು ಆರಿಸಿ ಮತ್ತೆ ಏಕಾಏಕಿ ಬೆಳಗುವುದರಿಂದ ತಂತಿಗಳಲ್ಲಿ ಅಸ್ಥಿರತೆ ಉಂಟಾಗಲಿದೆ. ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೋಲ್ಟೇಜ್ನಲ್ಲಿ ಏರಿಳಿತವಾಗಲಿದೆ ಎಂಬ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದ್ದು, ಇಂತಹ ನೂರಾರು ಸಂದೇಶಗಳು ಟ್ವಿಟ್ಟರ್ನಲ್ಲಿ ಪ್ರಕಟವಾಗಿದೆ. ಅಲ್ಲದೇ, ಗ್ರಿಡ್ (#Grid) ಹಾಗೂ ಅರ್ಥ್ ಅವರ್ (#EarthHour) ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಆಗಿವೆ.
ಈ ವಿಚಾರವನ್ನು ಇಂಧನ ಸಚಿವಾಲಯ ತಳ್ಳಿ ಹಾಕಿದ್ದು, ಈ ಆತಂಕ ನಿಜವಲ್ಲ ಎಂದು ತಿಳಿಸಿದೆ.