ಕೊಟ್ಟಾಯಂ, ಎ.04 (DaijiworldNews/PY) : ಮಾರಣಾಂತಿಕ ಕೊರೊನಾ ಸೋಂಕಿಗೆ ಹೆಚ್ಚಾಗಿ ವಯೋವೃದ್ದರು ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಭೀತಿಯ ಮಧ್ಯೆ ಕೇರಳದ ಪಟ್ಟಣಂತಿಟ್ಟಾದ 93 ವರ್ಷದ ಥೋಮಸ್ ಅಲಿಯಾಸ್ ಕುಂಜಾವರಾಚನ್ ಹಾಗೂ ಮತ್ತು 88 ವರ್ಷದ ಮರಿಯಮ್ಮ 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕೊರೊನಾ ವೈರಸ್ನಿಂದ ವಯೋವೃದ್ದ ದಂಪತಿ ಚೇತರಿಸಿಕೊಂಡಿದ್ದು, ಆರೋಗ್ಯವಂತರಾಗಿದ್ದಾರೆ. ಕೊರೊನಾ ವೈರಸ್ಗೆ ಜಾಗತಿಕವಾಗಿ 60ಕ್ಕಿಂತ ಹೆಚ್ಚು ವಯಸ್ಸಿನವರಿಗೆ ತುಂಬಾ ಅಪಾಯಕಾರಿಯೆಂದು ವರದಿಯಾಗಿತ್ತು.
ಆಸ್ಪತ್ರೆಯಿಂದ ವಾಪಾಸ್ಸಾದ ಥೋಮಸ್ ಅವರಿಗೆ ತಮ್ಮ ಖುಷಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿರಲಿಲ್ಲ, ಆ್ಯಂಬುಲೆನ್ಸ್ನಿಂದ ಕೆಳಗಿಳಿಯುತ್ತಿದ್ದಂತೆಯೇ ತನ್ನ ಮೊಮ್ಮಗನನ್ನು ಕೂಗಿ ಕರೆದಿದ್ದರು. ಇಟಲಿಯಿಂದ ಮೋನ್ಸೈ ಅಬ್ರಾಹಂ ಕುಟುಂಬ ವಾಪಸ್ಸಾಗಿತ್ತು. ಕೊರೊನಾ ಸೋಂಕಿನಿಂದ ಇಡೀ ಕುಟುಂಬವೇ ಗುಣಮುಖರಾದ ಬಳಿಕ ಕುಟುಂಬದ ಸದಸ್ಯರು ಒಟ್ಟು ಸೇರಿದ್ದರು ಎಂದು ವರದಿ ತಿಳಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಮೋನ್ಸೈ (55ವರ್ಷ), ಪತ್ನಿ ರೇಮಾನಿ ಮೋನ್ಸೈ(53ವರ್ಷ), ಪುತ್ರ ರಿಜೋ(25ವರ್ಷ) ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಕುಟುಂಬದ ಹಿರಿಯ ಸದಸ್ಯರಾದ ಥೋಮಸ್ ಹಾಗೂ ಮರಿಯಮ್ಮಾ ಅವರು 25 ದಿನಗಳ ಬಳಿಕ ಮನೆಗೆ ವಾಪಾಸ್ಸಾಗುವ ಮೂಲಕ ಇಡೀ ಕುಟುಂಬವೇ ಸಂತಸಗೊಂಡಿದೆ ಎಂದು ತಿಳಿಸಿದೆ.
ನನಗೆ ಇದೀಗ ದೊಡ್ಡ ನಿರಾಳತೆ ದೊರೆತಂತಾಗಿದೆ. ಇಟಲಿಯಿಂದ ನಾನು ಊರಿಗೆ ಬಂದ ಉದ್ದೇಶವೇ ನನ್ನ ತಂದೆಯನ್ನು ನೋಡುವುದಕ್ಕಾಗಿ. ಆದರೆ, ನಮ್ಮ ಇಡೀ ಕುಟುಂಬದ ಸಂತೋಷವನ್ನೇ ಕೊರೊನಾ ವೈರಸ್ ಕಿತ್ತುಕೊಂಡಿತ್ತು. ನಾವು ಎರಡಯ ಆಸ್ಪತ್ರೆಗಳಲ್ಲಿನ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು. ನನ್ನ ತಂದೆ-ತಾಯಿಯ ಆರೋಗ್ಯದ ಸ್ಥಿತಿ ನೋಡಿ ನನಗೆ ಚಿಂತೆಯಾಗಿತ್ತು. ಅವರು ದೇವರ ದಯೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಮೋನ್ಸೈ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.