ಬೆಂಗಳೂರು, ಎ.04 (DaijiworldNews/PY) : ರಾಜ್ಯ ಸರ್ಕಾರವು ಲಾಕ್ಡೌನ್ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ನೀಡಲಾಗುತ್ತಿದ್ದ ಉಚಿತ ಊಟಕ್ಕೆ ಬ್ರೇಕ್ ಹಾಕಿದ್ದು, ಇಂದಿರಾ ಕ್ಯಾಂಟೀನ್ನಲ್ಲಿ ರೂ.5 ಕ್ಕೆ ತಿಂಡಿ, ರೂ.10 ಕ್ಕೆ ಊಟ ನೀಡುವಂತ ನಿರ್ಧಾರ ಕೈಗೊಂಡಿದೆ.
ಮಾಜಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಗರಂ ಆಗಿದ್ದು, ಇಂತಹ ಸಮಯದಲ್ಲಿ ಬಡವರಿಗೆ ತಿಂಡಿ, ಊಟಕ್ಕೆ ದರ ನಿಗದಿ ಮಾಡಿರುವುದು ಸರಿಯಲ್ಲ. ದುಡಿಮೆ ಇಲ್ಲದೇ, ಕಾಸಿಲ್ಲದ ಈ ಪರಿಸ್ಥಿತಿಯಲ್ಲಿ ಈ ಕ್ಯಾಂಟೀನ್ಗಳಲ್ಲಿ ನೀಡುವ ಊಟ, ತಿಂಡಿಗೆ ದರ ನಿಗದಿ ಮಾಡಿರುವುದು ಅಮಾನವೀಯ. ಆದ್ದರಿಂದ ಈ ಕೂಡಲೇ ರಾಜ್ಯದ ಎಲ್ಲಾ ಕ್ಯಾಂಟೀನ್ಗಳಲ್ಲಿ ಕೊರೊನಾ ಸಮಸ್ಯೆ ಕಡಿಮೆ ಆಗುವವರೆಗೆ ಉಚಿತ ಊಟ, ತಿಂಡಿ ಕೊಡಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಇರುವ ಸಂದರ್ಭ ಬಡವರಿಗೆ ತಿಂಡಿ, ಊಟಕ್ಕೆ ಸಮಸ್ಯೆಯಾಗಬಾರದು ಎನ್ನುವ ಸಲುವಾಗಿ ರಾಜ್ಯ ಸರ್ಕಾರ ಉಚಿತ ತಿಂಡಿ, ಊಟ ನೀಡಲು ಸೂಚನೆ ನೀಡಿತ್ತು. ಲಾಕ್ಡೌನ್ ಬಳಿಕ ಇಂದೀರಾ ಕ್ಯಾಂಟೀನ್ನಲ್ಲಿ ತಿಂಡಿ, ಊಟ ಪ್ರೀ ಆಗಿ ದೊರೆಯುತ್ತಿತ್ತು. ರಾಜ್ಯ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದ್ದು, ಮೊದಲಿನಂತೆಯೇ ರೂ.5ಕ್ಕೆ ತಿಂಡಿ, ರೂ.10ಕ್ಕೆ ಊಟ ನೀಡುವಂತ ನಿರ್ಧಾರ ತೆಗೆದುಕೊಂಡಿದೆ. ಇಂದಿರಾ ಕ್ಯಾಂಟೀನ್ ಉಚಿತ ಊಟಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯಲ್ಲಿ ಬ್ರೇಕ್ ಹಾಕಲಾಗಿದೆ.