ರಾಮನಗರ, ಎ.04 (DaijiworldNews/PY) : ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಿರ್ಮಸಿರುವ ಕೊರೊನಾ ರೆಫೆರಲ್ ಆಸ್ಪತ್ರೆಗೆ ಭೇಟಿ ನೀಡಿ, ರಾಮನಗರ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರ್ಸನಲ್ ಪ್ರೊಟೆಕ್ಟೀವ್ ಎಕ್ವಿಪ್ಮೆಂಟ್ ಕಿಟ್ ಹಾಗೂ ವೆಂಟಿಲೇಟರ್ಗಳ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಸರ್ಕಾರ ಪ್ರತೀ ಜಿಲ್ಲೆಯಲ್ಲೂ 25 ವೆಂಟಿಲೇಟರ್ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಅದೃಷ್ಟವಶಾತ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ. ಆದರೂ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಮುಂಜಾಗ್ರತೆ ವಹಿಸಿ ಉತ್ತಮ ಕೆಲಸ ಮಾಡುತ್ತಿದೆ. ಕ್ವಾರಂಟೈನ್ನಲ್ಲಿ ಸೋಂಕಿನ ಶಂಕೆ ಮೇರೆಗೆ 8 ಜನರನ್ನು ಇರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 100 ಹಾಸಿಗೆಯ ಆಸ್ಪತ್ರೆ ಇದ್ದು, ಹೆಚ್ಚುವರಿಯಾಗಿ 100 ಹಾಸಿಗೆಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು. 40 ಆಕ್ಸಿಜನ್ ಬೆಡ್, 4 ವೆಂಟಿಲೇಟರ್ ವ್ಯವಸ್ಥೆ ಇದೆ. ಹೊಸ ಜಿಲ್ಲಾ ಆಸ್ಪತ್ರೆ ಕಟ್ಟಡ ಅಪೂರ್ಣವಾಗಿದ್ದು, ಆದಷ್ಟು ಬೇಗ ಕೆಲಸ ಮುಗಿಸುವಂತೆ ಮುಖ್ಯ ಎಂಜನಿಯರ್ಗೆ ಸೂಚಿಸಲಾಗಿದೆ. ವರ್ಷದ ಕೊನೆಗೆ ಹೊಸ ಜಿಲ್ಲಾ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುವುದು ಎಂದು ತಿಳಿಸಿದರು.
ರೈತರ ಬೇಡಿಕೆಗೆ ಸ್ಪಂದಿಸಿ ನಾಳೆಯಿಂದಲೇ ರೇಷ್ಮೆ ಮಾರುಕಟ್ಟೆ ಪ್ರಾರಂಭವಾಗಲಿದೆ. ಒಂದೇ ಮಾರುಕಟ್ಟೆ ಬದಲಿಗೆ 3-4 ಕಡೆಗಳಲ್ಲಿ ಮಾರಾಟ ವ್ಯವಸ್ಥೆ ಮಾಡಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬಹುದು. ಮುಂದಿನ 3-4 ತಿಂಗಳು ತುಂಬಾ ಕಠಿಣವಾಗಿರುವುದರಿಂದ ಎಚ್ಚರ ವಹಿಸಬೇಕು ಎಂದರು.
ಮಾವು ಮಂಡಿಗಳನ್ನು ಎಪಿಎಂಸಿಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಮೂರು ಮಾವು ಮಾರುಕಟ್ಟೆಯನ್ನು ಜಿಲ್ಲೆಯಲ್ಲಿ ತೆರೆಯಲಾಗುವುದು. ಸಹ ಮಾರುಕಟ್ಟೆ ಮಾಡಲು ಖಾಸಗಿಯವರು ಮುಂದೆ ಬಂದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಲಾಗುತ್ತದೆ. ಅದರೊಂದಿಗೆ, ಸಾಗಣೆಗೂ ವ್ಯವಸ್ಥೆ ಕಲ್ಪಿಸಿ, ಮಾವು ಬೆಳೆಗಾರರಿಗೆ ಒಳ್ಳೆಯ ದರ ಸಿಗುವ ಹಾಗೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಈವರೆಗೆ ಪಡಿತರವನ್ನು ಸುಮಾರು 5000 ಕೂಲಿ ಕಾರ್ಮಿಕರಿಗೆ ಒದಗಿಸಲಾಗಿದೆ. 2000 ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಶ್ರಮಿಕವರ್ಗವರು, ಅಸಹಾಯಕರು ಸೇರಿದಂತೆ ಯಾರೂ ಖಾಲಿ ಹೊಟ್ಟೆಯಲ್ಲಿ ಇರಬಾರದು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಪಡಿತರ ವಿತರಣೆ ವ್ಯವಸ್ಥೆ ಸರ್ಕಾರದ ಕಡೆಯಿಂದಲೂ ಆಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸುವುದು ಉತ್ತಮ. ಗಾರ್ಮೆಂಟ್ಸ್ಗಳಲ್ಲಿ ಮಾಸ್ಕ್ ಸಿದ್ಧವಾಗಬೇಕು, ಬಟ್ಟೆಯ ಮಾಸ್ಕ್ ಪುನರ್ ಬಳಕೆಗೆ ಯೋಗ್ಯವಾಗಿರುತ್ತವೆ ಎಂದು ತಿಳಿಸಿದರು.