ಬೆಂಗಳೂರು, ಏ 05 (Daijiworld News/MSP): ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಲು ಕರೆ ನೀಡಿದ್ದು, " ಕೊರೊನ ಸಂಕಷ್ಟವನ್ನು ಪ್ರಧಾನಿಯವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ, 6 ಎಪ್ರಿಲ್ 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿನ ದಿನ 5-04-2020ಕ್ಕೆ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತವೆ. ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೋನ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೇ? ಎಂದು ಪ್ರಶ್ನಿಸಿದ್ದಾರೆ.
ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೋನ ಸಂಕಷ್ಟದ ದಿನಗಳಲ್ಲಿ ನೇರಾ ನೇರ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ದೇಶದ ಸಂಕಟವನ್ನು ಬಗೆ ಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ 5 ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ಎಂದು ಟ್ವೀಟ್ ಮಾಡಿದ್ದಾರೆ.