ನವದೆಹಲಿ, ಎ.05 (Daijiworld News/MB) : ಎಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ 9 ನಿಮಿಷಗಳ ಕಾಲು ದೀಪಗಳನ್ನು ಆರಿಸಿ ಎಂದು ಪ್ರಧಾನಿ ಮೋದಿ ಹೇಳಿದ್ದು ಇದರಿಂದಾಗಿ ಪವರ್ಗ್ರಿಡ್ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂಬುದರ ಕುರಿತಾಗಿ ಕೇಂದ್ರ ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಕುರಿತಾಗಿ ತಿಳಿಸಿರುವ ಕೇಂದ್ರ ಇಂಧನ ಇಲಾಖೆ ಒಮ್ಮೆಲ್ಲೇ ಎಲ್ಲಾ ಲೈಟ್ ಆಫ್ ಮಾಡುವುದರಿಂದ ಗ್ರಿಡ್ಗೆ ಹಾನಿಯಾಗುತ್ತದೆ ಎಂಬ ಗ್ರಹಿಕೆ ಹಾಗೂ ಆತಂಕ ಸರಿಯಲ್ಲ. ಬೇಡಿಕೆಯ ಏರಿಳಿತವನ್ನು ನಿಭಾಯಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಲಾಕ್ಡೌನ್ ಕಾರಣದಿಂದಾಗಿ ಈಗಾಗಲೇ 25 ಶೇ. ವಿದ್ಯುತ್ ಬೇಡಿಕೆ ಕುಸಿದಿದ್ದು ಒಂದೇ ಭಾರಿಗೆ ಎಲ್ಲಾ ಲೈಟ್ಗಳನ್ನು ಆಫ್ ಮಾಡುವುದರಿಂದ ವಿದ್ಯುತ್ ಬೇಡಿಕೆಯಲ್ಲಿ ಒಮ್ಮೆಲೇ ಕುಸಿತವಾಗುತ್ತದೆ. ವಿದ್ಯುತ್ ಪವರ್ ಗ್ರಿಡ್ನಲ್ಲಿನ ಜನರೇಟರ್ ಹಾಗೂ ಟ್ರಾನ್ಸ್ ಫಾರ್ಮರ್ಗಳಿಗೆ ಹಾನಿಯಾಗಲಿದೆ. ಇದನ್ನು ಸರಿ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಲಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು.
ದೇಶದ ಪವರ್ಗ್ರಿಡ್ ಸ್ಥಿರ ಹಾಗೂ ಸುದೃಢವಾಗಿದೆ. ಪ್ರಧಾನಿ ಮೋದಿ ಮನೆಯ ದೀಪ ಆರಿಸಲು ಮಾತ್ರ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬೀದಿ ದೀಪ, ಕಂಪ್ಯೂಟರ್, ಟಿವಿ, ಫ್ಯಾನ್, ಫ್ರಿಜ್, ಎಸಿ ಮೊದಲಾದವುಗಳನ್ನು ಬಂದ್ ಮಾಡಬೇಕಾಗಿಲ್ಲ. ಹಾಗೆಯೇ ಆಸ್ಪತ್ರೆಗಳು, ಪುರಸಭೆ ಸೇವೆಗಳ ಕಚೇರಿ, ಪೊಲೀಸ್ ಠಾಣೆಗಳು, ಉತ್ಪಾದನಾ ಘಟಕಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಜನರ ಭದ್ರತೆಯ ದೃಷ್ಟಿಯಿಂದಾಗಿ ಎಲ್ಲಿಯೂ ಬೀದಿ ದೀಪಗಳನ್ನು ಆರಿಸಬಾರದು ಎಂದು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಹಾಗೆಯೇ ಈ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಏಕಾಏಕಿ ಕುಸಿತವಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ನಿಭಾಯಿಸಲು ಸರಣಿ ಕ್ರಮಗಳನ್ನಯ ಕೈಗೊಳ್ಳಲು ಉತ್ತರಪ್ರದೇಶದ ಸ್ಟೇಟ್ ಲೋಡ್ ಡಿಸ್ ಪ್ಯಾಚ್ ಸೆಂಟರ್ ಎಲ್ಲಾ ಘಟಕಗಳಿಗೆ ಸೂಚಿಸಿದೆ.
ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಪಿಕ್ ಲೋಡ್ ಅವಧಿಯಾಗಿರುವ ಕಾರಣದಿಂದಾಗಿ ಭಾನುವಾರ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಲೋಡ್ಶೆಡ್ಡಿಂಗ್ ಆರಂಭಿಸುವಂತೆ ತಿಳಿಸಿದೆ. ತಮಿಳುನಾಡು ಟ್ರಾನ್ಸ್ಮಿಷನ್ ಕಾರ್ಪೋರೇಷನ್ ಕೂಡಾ ತನ್ನ ಕಾರ್ಯಾಚರಣೆ ವಿಭಾಗಕ್ಕೆ ಸೂಚಿಸಿದೆ.
ಅಧಿಕಾರಿಯೊಬ್ಬರು ಒಮ್ಮೆಲ್ಲೇ ದೀಪ ಆರಿಸುವುದರಿಂದಾಗಿ ಭಾನುವಾರ ವಿದ್ಯುತ್ಛಕ್ತಿಯ ಬೇಡಿಕೆಯಲ್ಲಿ 10 ಜಿಡಬ್ಲು (ಗಿಗಾವ್ಯಾಟ್) ನಿಂದ 12 ಜಿಡಬ್ಲುನಷ್ಟು ಕುಸಿತವಾಗಬಹುದು ಎಂದು ಹೇಳಿದ್ದಾರೆ.
ಆದರೆ ಬ್ಲಾಕ್ಔಟ್ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲ ಬಾರಿಯಲ್ಲ ಮತ್ತು ಇದರಿಂದ ಪವರ್ಗ್ರಿಡ್ಗೆ ಹಾನಿಯಾಗುವುದಿಲ್ಲ. ಈ ಹಿಂದೆ ಅರ್ಥ್ ಅವರ್ ಸಂದರ್ಭದಲ್ಲೂ ಹೀಗೆ ನಡೆದಿದೆ ಎಂದು ಹೇಳಿದ್ದಾರೆ.