ಬೆಂಗಳೂರು,ಏ 05 (Daijiworld News/MSP): ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರಕಾರದ ಹೊಣೆ. ಗಡಿ ಮುಚ್ಚುವ ನಿರ್ಧಾರ ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ. ಪೂರಕ ದಾಖಲೆಗಳನ್ನು ಅವಲೋಕಿಸಿ, ನನ್ನ ಸರಕಾರ ತೆಗೆದುಕೊಂಡಿರುವ ಪ್ರಜ್ಞಾವಂತ ನಿರ್ಧಾರ ಇದಾಗಿದೆ ಎಂದು ಕರ್ನಾಟಕ-ಕೇರಳ ಗಡಿ ಬಂದ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕ-ಕೇರಳ ಗಡಿ ತೆರವು ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ’ಪ್ರತಿ ವ್ಯಕ್ತಿಯ ಪ್ರಾಣ ರಕ್ಷಣೆ, ನಮ್ಮ ಸರ್ಕಾರದ ಹೊಣೆ’ ಎಂದು ಹೇಳಿದ್ದಾರೆ.
"ಒಂದು ವೇಳೆ ಗಡಿ ತೆರವುಗೊಳಿಸಿದರೆ ನನ್ನ ರಾಜ್ಯದ ನೆಮ್ಮದಿ ಹಾಳಾಗುತ್ತದೆ. ಮೃತ್ಯವನ್ನು ನಾವೇ ಆಲಂಗಿಸಿಕೊಂಡಂತಾಗುತ್ತದೆ. ಕೇರಳದಲ್ಲಿ ವಾಸಿಸುತ್ತಿರುವ ಸಹೋದರ-ಸಹೋದರಿಯರ ಹಿತ ಕಾಪಾಡುವ ಬಗ್ಗೆ ನನಗೂ ಅಂತಃಕರಣವಿದೆ. ಆದರೆ, ಕೊರೊನಾ ಮಹಾಮಾರಿ ಕ್ಷಣಮಾತ್ರದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹಾಗಾಗಿ, ಗಡಿ ತೆರವು ಮಾಡಿದರೆ, ಎರಡೂ ರಾಜ್ಯದ ನೆಮ್ಮದಿ ಹಾಳು ಮಾಡಿದಂತಾಗುತ್ತದೆ. ಹೀಗಾಗಿ ವಾಪಸ್ ಪಡೆಯವ ನಿರ್ಧಾರ ಸದ್ಯಕ್ಕೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.