ಚಿಕ್ಕಮಗಳೂರು, ಎ.05 (Daijiworld News/MB) : ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲೀಘಿ ಸಮಾವೇಶದಲ್ಲಿ ಭಾಗಿಯಾಗಿದ್ದ ಅನೇಕರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ದೇಶಾದಾದ್ಯಂತ ಕೊರೊನಾ ಹರಡಿಸುವ ದುಷ್ಕೃತ್ಯವಿದೆ. ಕೊರೊನಾ ಜಿಹಾದಿ ವಾಸನೆ ಇದ್ದಂತೆ ಕಾಣುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಕುರಿತಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸರು ದೆಹಲಿ ಸಮಾವೇಶದಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅವರು ಕೊರೊನಾ ಮುಕ್ತ ಭಾರತ ಮಾಡಲು ಸಹಕರಿಸುತ್ತಿಲ್ಲ ಎಂಬುದು ಅವರು ಮಾಡುವ ವರ್ತನೆಯಿಂದಲ್ಲೇ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಸಾದಿಕ್ ನಗರದಲ್ಲಿ ಕೊರೊನಾ ಸೋಂಕಿತರ ಮಾಹಿತಿ ಪಡೆಯಲು ಹೋದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವುದು ನೋಡಿದಾಗ ಒಂದು ಸಮುದಾಯ ಕೊರೊನಾ ತಡೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದಿದ್ದಾರೆ.
ಈ ನೆಲದ ಕಾನೂನನ್ನು ಗೌರವಿಸದವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ರುಚಿ ತೋರಿಸಬೇಕಾಗುತ್ತದೆ. ನಮ್ಮ ನೆಲದ ಕಾನೂನು ಪಾಲನೆ ಮಾಡುವುದಿಲ್ಲ ಎಂದರೆ ಅದರ ಹಿಂದೆ ಯಾವುದೋ ಷಡ್ಯಂತ್ರ ನಡೆಯುತ್ತಿದೆ ಎಂದು ಅರ್ಥ. ಯಾರು ಕೊರೊನಾ ಸೋಂಕು ಇನ್ನೊಬ್ಬರಿಗೆ ಹರಡುತ್ತಿದ್ದಾರೋ ಅವರನ್ನು ಪತ್ತೆ ಮಾಡಿ ಸರ್ಕಾರ ಉಗ್ರ ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ಹೇಳಿದರು.