ಬೆಂಗಳೂರು, ಎ.05 (Daijiworld News/MB) : ಔಷಧಿಗಾಗಿ ಮನೆಯಿಂದ ಹೊರ ಹೋದೆ, ಯಾವುದೇ ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ ಎಂದು ನಟಿ ಶರ್ಮಿಳಾ ಮಾಂಡ್ರೆ ಅಪಘಾತದ ಕುರಿತಾಗಿ ಹೇಳಿದ್ದಾರೆ.
ಕೊರೊನಾ ಭೀತಿಯ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ನಟಿ ಶರ್ಮಿಳಾ ಮಾಂಡ್ರೆ ರಾತ್ರೋರಾತ್ರಿ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್ ಹೋಗಿ ಅಪಘಾತ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಅಪಘಾತದಲ್ಲಿ ಗಾಯಗೊಂಡಿದ್ದ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಸ್ವತಃ ಶರ್ಮಿಳಾ ಮಾಂಡ್ರೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಬಗ್ಗೆ ಒಪ್ಪಿಕೊಂಡಿರುವ ಶರ್ಮಿಳಾ ಅವರು ನಾನು ಔಷಧಿಯನ್ನು ಖರೀದಿಸಲು ಮಾತ್ರ ಮನೆಯಿಂದ ಹೊರ ಹೋಗಿದ್ದೆ. ಆದರೆ ಲಾಕ್ಡೌನ್ ಇದ್ದ ಕಾರಣದಿಂದಾಗಿ ಓಡಾಡಲು ಪಾಸ್ ಹೊಂದಿದ್ದ ಸ್ನೇಹಿತರ ಸಹಾಯವನ್ನು ಪಡೆದಿದ್ದೆ ಅಷ್ಟೆ ಎಂದು ಹೇಳಿದ್ದಾರೆ.
ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಇಬ್ಬರಲ್ಲಿ ಸಹಾಯ ಮಾಡುವಂತೆ ಹೇಳಿದೆ. ಯಾಕೆಂದರೆ ಅವರ ಬಳಿ ಪಾಸ್ ಇತ್ತು. ಹಾಗಾಗಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದೆ. ಈ ಸಂದರ್ಭದಲ್ಲಿ ಅಪಘಾತವಾಗಿದೆ ಎಂದು ಹೇಳಿದ್ದಾರೆ.
ಅಪಘಾತ ಆದ ಸಂದರ್ಭದಲ್ಲಿ ನಾನು ಕಾರು ಓಡಿಸುತ್ತಿರಲಿಲ್ಲ. ನನ್ನ ಸ್ನೇಹಿತ ಡಾನ್ ಕಾರು ಚಲಾಯಿಸುತ್ತಿದ್ದ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ ಎಂದಿದ್ದಾರೆ.
ಅಪಘಾತ ಆದ ಬಳಿಕ ಈ ಬಗ್ಗೆ ಬಂದಿರುವ ಸುದ್ದಿಯ ಬಗ್ಗೆ ನಾನು ಕೇಳಿದ್ದೇನೆ. ನಾವು ಸಾಮಾಜಿಕ ಅಮಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬುದು ನನಗೆ ತಿಳಿದಿದೆ. ಈ ಸಂದರ್ಭದಲ್ಲಿ ನಾನು ಪಾರ್ಟಿ ಮಾಡಲು ಸಾಧ್ಯವಿಲ್ಲ. ಕೊರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇರುವ ಕಾರಣದಿಂದಾಗಿ ನಾನು ಮನೆಯಲ್ಲೇ ಇದ್ದೇನೆ. ಆದರೆ ನಡೆದ ಘಟನೆ ಏನು ಎಂದು ತಿಳಿಯದೆ ಎಲ್ಲೆಡೆ ಬೇರೆ ರೀತಿಯಲ್ಲೇ ಸುದ್ದಿ ವೈರಲ್ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶರ್ಮಿಳಾ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಅವರಿಗೆ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು ಶರ್ಮಿಳಾ, ಶಿಫಾ ಜೋಹರ್, ಲೋಕೇಶ್ ಮತ್ತು ಡಾನ್ ಥಾಮಸ್ ನಾಲ್ಕು ಮಂದಿ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.