ನವದೆಹಲಿ, ಎ.05 (Daijiworld News/MB) : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಲೇರಿಯಾ ವಿರೋಧಿ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಭಾನುವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ, ವೈಟ್ಹೌಸ್ನಲ್ಲಿ ಕೊರೋನ ವೈರಸ್ ಟಾಸ್ಕ್ ಫೋರ್ಸ್ಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ನಷ್ಟು ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡುವಂತೆ ಮನವಿ ಮಾಡಿದ್ದು, ಮಾತ್ರೆಗಳ ಸರಬರಾಜಿಗೆ ನಾವು ಮಾಡಿರುವ ಆದೇಶದ ಮೇಲಿನ ತಡೆ ತೆರವುಗೊಳಿಸುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ನನ್ನ ವೈದ್ಯರ ಬಳಿ ಕೇಳಿ ಆ ಬಳಿಕ ನಾನು ಹೈಡ್ರೊಕ್ಸಿಕ್ಲೋರೊವಿಕ್ ಮಾತ್ರೆ ಸೇವಿಸುತ್ತೇನೆ. ಭಾರತ ಆ ಮಾತ್ರಯನ್ನು ಬಹಳಷ್ಟು ತಯಾರಿ ಮಾಡುತ್ತಿದೆ. ಅಲ್ಲಿನ ಕೋಟ್ಯಾಂತರ ಜನರಿಗೆ ಇದರ ಅಗತ್ಯವಿದೆ. ಮಲೇರಿಯಾ ವಿರೋಧಿ ಮಾತ್ರೆಯನ್ನು ಸ್ಟ್ಪಾಟೆಜಿಕ್ ನ್ಯಾಶನಲ್ ಸ್ಟಾಕ್ಪೈಲ್ ಮೂಲಕ ಚಿಕಿತ್ಸೆಗಾಗಿ ಬಿಡುಗಡೆ ಮಾಡಲಾಗುತ್ತದೆ. ನಾವು ಕೇಳಿದಷ್ಟು ಮಾತ್ರೆಗಳನ್ನು ಬಿಡುಗಡೆ ಮಾಡಿದರೆ ಅವರನ್ನು ಪ್ರಶಂಸೆ ಮಾಡುವೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಈಗಾಗಲೇ ಮಲೇರಿಯಾ ವಿರೋಧಿ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಹಾಗೂ ಅದರ ಸೂತ್ರಗಳ ರಫ್ತನ್ನು ತಡೆ ಹಿಡಿದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಟ್ರಂಪ್ ಜೊತೆ ಮಾತುಕತೆ ನಡೆಸಲಾಗಿದೆ. ಉತ್ತಮ ಚರ್ಚೆ ಮಾಡಿದ್ದೇವೆ. ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತ - ಅಮೆರಿಕ ಸಂಪೂರ್ಣ ಶಕ್ತಿಯನ್ನು ಬಳಸಲು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.