ಚಾಮರಾಜನಗರ, ಏ 05 (Daijiworld News/MSP): ಲಾಕ್ ಡೌನ್ ಮುಗಿದ ಬಳಿಕ ಪರಿಸ್ಥಿತಿ ನೋಡಿಕೊಂಡು ಎಸ್ಎಸ್ಎಲ್'ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುವುದು . ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ಬಳಿಕ ಒಂದು ವಾರ ಶಾಲೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, " ಲಾಕ್ ಡೌನ್ ನಿಂದಾಗಿ ಪರೀಕ್ಷೆ ಮುಂದೂಡಿ ದೀರ್ಘ ಕಾಲ ಅಭ್ಯಾಸ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಚೈತನ್ಯ ತುಂಬಬೇಕಿದೆ. ಪರೀಕ್ಷೆ ಬರೆಯುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ಉತ್ಸಾಹ ಮೂಡಬೇಕಾಗಿದೆ. ಇದಕ್ಕಾಗಿ ಒಂದು ವಾರ ತರಗತಿ ನಡೆಸಿ ನಂತರ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲಾಗುವುದು" ಎಂದರು.
ಏ.೧೪ ರ ಲಾಕ್ ಡೌನ್ ಮುಗಿದ ಬಳಿಕ ಮುಂದಿನ ಪರಿಸ್ಥಿತಿ ಅವಲೋಕಿಸಿ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. 1 ವಾರ ಶಾಲೆ ನಡೆಸಿ ನಂತರ ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.