ನವದೆಹಲಿ, ಎ.05 (DaijiworldNews/PY) : ಕೇಂದ್ರ ಸರ್ಕಾರವು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಲಾಕ್ಡೌನ್ ಘೋಷಣೆ ಮಾಡುವ ಮೂಲಕ ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
21 ದಿನಗಳ ಲಾಕ್ ಡೌನ್ ಅವಧಿ ಮುಗಿದ ಬಳಿಕ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ತನ್ನ ಮುಂದಿನ ಯೋಜನೆಯನ್ನು ತಿಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಲಾಕ್ಡೌನ್ ಘೋಷಣೆ ಮಾಡಬೇಕಿತ್ತು. ಆದರೆ, ಇದನ್ನು ಮಾಡದೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ದೊಡ್ಡ ತಪ್ಪು ಮಾಡಿದ್ದಾರೆ. ಹೆಚ್ಚಿನ್ ಸಿದ್ದತೆಗಾಗಿ ಯಾವುದೇ ನೋಟಿಸ್ ಕೂಡಾ ನೀಡಿಲ್ಲ. ದಿಢೀರನೆ ಲಾಕ್ಡೌನ್ ಜಾರಿ ಮಾಡಿದ್ದು, ಆಘಾತವನ್ನುಂಟುಮಾಡಲಾಯಿತು ಎಂದರು.
ಯುದ್ಧದ ರೀತಿಯಲ್ಲಿ ಇಂಗ್ಲೆಂಡ್ , ಕೆನಡಾದಂತಹ ರಾಷ್ಟ್ರಗಳಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತಿದೆ. ಆದರೆ, ಆ ರೀತಿಯಲ್ಲಿ ನಮ್ಮಲ್ಲಿ ನಡೆಯುತ್ತಿಲ್ಲ. ಆರ್ಥಿಕ ಮತ್ತು ಆರೋಗ್ಯ ತುರ್ತು ಪರಿಸ್ಥಿತಿ ಜಾರಿ ಮಾಡದೇ ಲಾಕ್ಡೌನ್ ಮಾಡಿರುವುದರಿಂದ ಸಾಕಷ್ಟು ಅವ್ಯವಸ್ಥೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪರೀಕ್ಷೆ ನಡೆಸಿದ ಮಾತ್ರಕ್ಕೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಯೋಚಿಸಿಲ್ಲ ಎಂಬುದಾಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೊರೊನಾ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಚನೆಯಾಗಿರುವ ಕಾಂಗರೆಸ್ ಕಾರ್ಯ ಪಡೆಯಲ್ಲಿ ಮೊಯ್ಲಿ ಅವರು ಕೂಡಾ ಸದಸ್ಯರಾಗಿದ್ದಾರೆ.
ವ್ಯವಹಾರಕ್ಕೆ ಅಂತಾರಾಷ್ಟ್ರೀಯ ಸ್ಥಗಿತ ಮತ್ತು ಲಾಕ್ಡೌನ್ನಿಂದ ಸಾಕಷ್ಟು ತೊಂದರೆಯಾಗಿದೆ. ಸರ್ಕಾರ ಎ.14ರ ಬಳಿಕ ಏನು ಮಾಡಲಿದೆ, ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಲಾಕ್ಡೌನ್ ಮಾರ್ಪಾಡು ಹಾಗೂ ಮತ್ತಿತರ ಅಂಶಗಳನ್ನು ತಿಳಿಸಬೇಕು. ಇಲ್ಲದಿದ್ದರೆ ಮತ್ತಷ್ಟು ಅವ್ಯವಸ್ಥೆ ಉಂಟಾಗಲಿದೆ ಎಂದರು.