ಮುಂಬೈ, ಎ.06 (DaijiworldNews/PY) : ಲಾಕ್ಡೌನ್ ಮಧ್ಯೆ ಜನರನ್ನು ಸೇರಿಸಿಕೊಂಡು ಹುಟ್ಟುಹಬ್ಬ ಆಚರಿಸಿದ ಆರೋಪದಲ್ಲಿ ಮಹಾರಾಷ್ಟ್ರ ಬಿಜೆಪಿ ಶಾಸಕನ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ವಾರ್ದಾದ ಬಿಜೆಪಿ ಶಾಸಕ ದಾದಾರಾವ್ ಕೆಚೆ ಅವರು ಹುಟ್ಟುಹಬ್ಬ ಆಚರಿಸಿಕೊಂಡವರು. ಭಾನುವಾರ ಆರ್ವಿಯಲ್ಲಿರುವ ಇವರ ನಿವಾಸದಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ನೆರೆದಿದ್ದರು. ಅಲ್ಲದೇ, ಹುಟ್ಟುಹಬ್ಬದ ಪ್ರಯುಕ್ತ ದವಸ ಧಾನ್ಯ ನೀಡುತ್ತಾರೆ ಎಂದು ತಿಳಿದ ಜನರು ಇವರ ನಿವಾಸದತ್ತ ಧಾವಿಸಿದ್ದು, ಅಲ್ಲಿ ಯಾವುದೇ ದವಸ-ಧಾನ್ಯ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಈ ವಿಚಾರವನ್ನು ತಿಳಿದ ಪೊಲೀಸರು ನಿವಾಸಕ್ಕೆ ಆಗಮಿಸಿ ನೆರೆದಿದ್ದ ಚದುರಿಸಿದ್ದಾರೆ. ಆದರೂ ಶಾಸಕರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಾಗಿ ಶಾಸಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಾದಾರಾವ್, ನಾಲ್ಕು ದಿನಗಳ ಹಿಂದೆ ನಾನು ಜನರಲ್ಲಿ ಬೇಡಿಕೊಂಡಿದ್ದೆ. ನನ್ನ ಮನೆ ಬಳಿ ಬರುವುದು ಬೇಡ. ಹುಟ್ಟುಹಬ್ಬದ ಸಂದರ್ಭ ಹಾರೈಸುವುದು ಬೇಡ ಎಂದು ತಿಳಿಸಿದ್ದೆ. ನನ್ನ ವಿರುದ್ದ ಯಾರೋ ಕಿಡಿಗಡಿಗೇಳು ಪಿತೂರಿ ನಡೆಸಿ ದವಸ-ಧಾನ್ಯ ನೀಡಿತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಯಾರಿಗೂ ನಾನು ಫೋನ್ ಕರೆ ಮಾಡಿರಲಿಲ್ಲ ಎಂದಿದ್ದಾರೆ.