ಬೆಳಗಾವಿ, ಎ.06 (DaijiworldNews/PY) : ಕೊರೊನಾ ಆತಂಕದ ನಡುವೆ ಟಿಕ್ ಟಾಕ್ ಮಾಡಿ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಯವಕನೋರ್ವನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದು, ಆತನನ್ನು ಬಳಿಕ ಪಲೀಸರು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ಮೀರಾಸಾಬ್ ಸಾಧಿಕ ನೇಸರಗಿ (20) ಎಂಬ ಯುವಕನನ್ನು ಗ್ರಾಮ ಪಂಚಾಯಿತಿಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ಚಪ್ಪಲಿಯಿಂದ ಥಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ದೇಶನೂರ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿತ್ತು. ಪೊಲೀಸರು ಗಲಾಟೆ ನಿಯಂತ್ರಿಸಲು ಹಾಗೂ ಗ್ರಾಮದ ಶಾಂತಿ ನೆಲೆಸಲು ಶಾಂತಿ ಸಭೆ ನಡೆಸಿದ್ದರು. ಬಳಿಕ ಪೊಲೀಸರು ಪಥಸಂಚಲನ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಇದರ ವಿಡಿಯೋ ಮಾಡಿಕೊಂಡಿದ್ದ ಯುವಕನು ಮೀರಾಸಾಬ್ ಪೊಲೀಸರ ಅವಹೇಳನಕಾರಿಯಾಗಿ ಟಿಕ್ಟಾಕ್ ವಿಡಿಯೋ ಸಿದ್ದಪಡಿಸಿದ್ದನು. ಈ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದಂತೆ ಗಮನಿಸಿದ ಗ್ರಾಮಸ್ಥರು ಗ್ರಾಮ ಪಂಚಾಯತ್ಗೆ ಯುವಕನನ್ನು ಎಳೆದುಕೊಂಡು ತಂದಿದ್ದಾರೆ.
ಯುವಕನಿಗೆ ಗ್ರಾಮದ ಕೆಲವರು ಗ್ರಾಮ ಪಂಚಾಯತ್ ಅಧ್ಯಕ್ಷ ದೀಪಕ ಪಾಟೀಲ ಎದುರೇ ಚಪ್ಪಲಿಯಿಂದ ಹೊಡೆದಿದ್ದಾರೆ. ಟಿಕ್ಟಾಕ್ನಲ್ಲಿರುವ ವಿಡಿಯೋವನ್ನು ಯುವಕನಿಂದಲೇ ಡಿಲೀಟ್ ಮಾಡಿಸಿ ಸಾರ್ವಜನಿಕವಾಗಿ ಕ್ಷಮೆ ಕೋರಿದ ನಂತರ ಯುವಕನನ್ನು ಮನೆಗೆ ಕಳುಹಿಸಿದ್ದಾರೆ. ಈ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆಯೇ ಯುವಕನನ್ನು ಬಂಧಿಸಿದ್ದು, ಈ ವಿಚಾರವಾಗಿ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.