ಮೈಸೂರು, ಎ.06 (DaijiworldNews/MSP) : ಮೈಸೂರು ಜಿಲ್ಲೆಯಲ್ಲಿ ಮತ್ತೆ ಏಳು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 35ಕ್ಕೆ ಏರಿದೆ.
ಜಿಲ್ಲೆಯಲ್ಲಿ ಒಂದು ವಾರದ ಹಿಂದೆಯಷ್ಟೇ ನಂಜನಗೂಡಿನ ಜುಬಿಲಿಯಂಟ್ ಫಾರ್ಮಾ ಕಂಪೆನಿಯ ಒಬ್ಬರಿಗೆ ಮಾತ್ರ ಕೊರೊನಾ ಸೋಂಕು ಇತ್ತು. ಆದರೆ, ಇದೀಗ ನಂಜನಗೂಡಿನ ಜುಲಿಯಂಟ್ ಫಾರ್ಮಾ ಕಂಪೆನಿಯಲ್ಲಿ ಕೆಲಸ ಮಾಡುವ ಸುಮಾರು 21 ಮಂದಿಗೆ ಈಗಾಗಲೇ ಕೊರೊನಾ ಸೋಂಕು ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಮತ್ತೆ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಏಳು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಒಂದೇ ದಿನ 12 ಹೊಸ ಪ್ರಕರಣ
ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 12 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ಏಳು ಸೋಂಕಿತರು ಪತ್ತೆಯಾಗಿದ್ದರೆ, ಬಾಗಲಕೋಟೆಯಲ್ಲಿ ಇಬ್ಬರಲ್ಲಿ ಕೊರೊನಾ ವ್ಯಾಪಿಸಿದೆ. ಹಾಗೆಯೇ ಬೆಂಗಳೂರು ನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ಹಾಗೂ ಕೇರಳ ಮೂಲದ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ163ಕ್ಕೆ ಏರಿದ್ದು, ಇದು ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರಕ್ಕೂ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ.