ನವದೆಹಲಿ, ಎ.06 (DaijiworldNews/MSP) : ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡು ಅಧಿಕಾರಿಗಳ ಕಣ್ಣು ತಪ್ಪಿಸಿ ತಮ್ಮ ದೇಶಕ್ಕೆ ಮರಳಲು ವಿಶೇಷ ವಿಮಾನವೇರಿ ಕುಳಿತಿದ್ದ ಮಲೇಷ್ಯಾದ ಎಂಟು ಮಂದಿಯನ್ನು ಭಾನುವಾರ ಬಂಧಿಸಲಾಗಿದೆ.
ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೆಲವರಿಂದಾಗಿ ಇದೀಗ ಇಡೀ ದೇಶದೆಲ್ಲೆಡೆ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಸಮಾವೇಶದಲ್ಲಿ ಹಲವು ಹೊರ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿರುವುದೇ ಭಾರತದಲ್ಲಿಯೂ ಕೊರೊನಾ ಸೋಂಕು ಇಷ್ಟೊಂದು ತೀವ್ರವಾಗಿ ಹರಡುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ದೆಹಲಿಯಲ್ಲಿ ತಬ್ಲಿಘಿ ಸಮಾವೇಶ ಆಯೋಜಿಸಿದವರ ವಿರುದ್ಧವೂ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.
ಹೀಗಿರುವಾಗ, ಭಾರತದಲ್ಲಿ ಸಿಲುಕಿರುವ ತನ್ನ ದೇಶದ ಪ್ರಜೆಗಳನ್ನು ಕರೆಸಿಕೊಳ್ಳುವುದಕ್ಕೆ ಕಳುಹಿಸುವ ವಿಶೇಷ ವಿಮಾನಗಳ ಹಾರಾಟಕ್ಕೆ ಮಾತ್ರ ಈಗ ಅನುಮತಿ ನೀಡಲಾಗಿದೆ. ಅದರಂತೆ, ಮಲೇಷ್ಯಾ ಸರಕಾರ ಕೂಡ ಮಲಿಂದೊ ಏರ್ ವಿಮಾನಯಾನ ಸಂಸ್ಥೆ ವಿಮಾನವು 30 ಮಲೇಷ್ಯಾ ಪ್ರಜೆಗಳನ್ನು ಕರೆದೊಯ್ಯುವುದಕ್ಕೆ ಸಿದ್ಧವಾಗಿತ್ತು. ಈ ವಿಮಾನದಲ್ಲಿ ಮಲೇಷ್ಯಾ ಪ್ರಜೆಗಳ ಜತೆಗೆ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡು ದಿಲ್ಲಿಯಲ್ಲಿ ಯಾವುದೇ ಸುಳಿವು ಇಲ್ಲದೆ ಇದ್ದ8 ಮಂದಿ ಕೂಡ ಪಲಾಯನ ಮಾಡುವುದಕ್ಕೆ ರೆಡಿಯಾಗಿದ್ದರು. ಇದರ ಸುಳಿವು ಪಡೆದ ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಷ್ಟೇಅಲ್ಲದೆ, ಈಗ ಬಂಧನಕ್ಕೆ ಒಳಗಾಗಿರುವ 8 ಮಂದಿ ಮಲೇಷಿಯಾ ಪ್ರಜೆಗಳ ವಿರುದ್ಧ ವಿದೇಶಿ ಕಾಯ್ದೆ ಉಲ್ಲಂಘನೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹಾರಾಷ್ಟ್ರದ ನವೀ ಮುಂಬಯಿನಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿದ್ದು, ಫಿಲಿಫೈನ್ಸ್ನ 10 ವಿದೇಶಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.