ಕಾಸರಗೋಡು, ಏ 06 (DaijiworldNews/SM): ಕೇರಳದಿಂದ ಕರ್ನಾಟಕಕ್ಕೆ ಅಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಕರೆದೊಯ್ಯಲು ಅನುಮತಿ ಲಭಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕರ್ನಾಟಕಕ್ಕೆ ಕೊರೋನಾ ಸೋಂಕಿತರಲ್ಲದ ರೋಗಿಗಳಿಗೆ ಪ್ರವೇಶ ನೀಡಲಾಗುವುದು. ಅಲ್ಲಿನ ಆಸ್ಪತ್ರೆಗಳ ವೈದ್ಯಕೀಯ ಪ್ರಮಾಣ ಪತ್ರ ಸಹಿತ ತೆರಳಿದ್ದಲ್ಲಿ ಪ್ರವೇಶ ಲಭಿಸಲಿದೆ. ಮಂಗಳೂರಿಗೆ ತೆರಳುವವರು ವೈದ್ಯಕೀಯ ಸರ್ಟಿಫಿಕೇಟ್ ಮೂಲಕ ತೆರಳಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಂಗಳೂರಿನ ಯಾವ ಆಸ್ಪತ್ರೆಗೆ ತೆರಳುತ್ತಾರೆ ಎಂಬುದನ್ನು ನಮೂದಿಸಿರಬೇಕು. ತಲಪಾಡಿ ಗಡಿಯಲ್ಲಿ ನೇಮಿಸಿರುವ ವಿಶೇಷ ವೈದ್ಯರ ತಂಡ ಪರಿಶೀಲನೆ ನಡೆಸಿದ ಬಳಿಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ಲಭಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಕರ್ನಾಟಕದಿಂದ ಯಾವುದೇ ಅಧಿಕೃತ ಹೇಳಿಕೆಗಳು ಲಭ್ಯವಾಗಿಲ್ಲ. ಹಾಗೂ ಕರ್ನಾಟಕದಿಂದ ಸರಕಾರ ಅನುವು ಮಾಡಿಕೊಟ್ಟಿಲ್ಲ. ಆದರೆ, ಯಾವ ಆಧಾರದಲ್ಲಿ ಕೇರಳ ಸಿಎಂ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬುವುದು ಸ್ಪಷ್ಟಗೊಂಡಿಲ್ಲ. ಇದೀಗ ಕೇರಳ ಸಿಎಂ ಹೇಳಿಕೆ ನೀಡಿದ ಬಳಿಕ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.