ಹೈದರಾಬಾದ್, ಎ.07 (Daijiworld News/MB) : ಆಂಧ್ರಪ್ರದೇಶದ ಹಲವು ದೇವಸ್ಥಾನಗಳು ಸೋಂಕು ಶಂಕಿತರಿಗೆ ಆಶ್ರಯವನ್ನು ನೀಡಲು ಮುಂದಾಗಿದ್ದು ಇದರ ಸಾರಥ್ಯದಲ್ಲಿ ತಿರುಮಲ ತಿರುಪತಿ ದೇವಸ್ಥಾನವಿದೆ. ಪದ್ಮಾವತಿ ನಿಲಯಂ ಹಾಗೂ ವಿಷ್ಣು ವಾಸಂ ಸೇರಿದಂತೆ ಹಲವು ಛತ್ರಗಳನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲು ತಯಾರಿ ನಡೆದಿದೆ.
ಕೊರೊನಾ ಸೋಂಕಿಗೆ ಕೋಮು ಬಣ್ಣ ಬಳಿಯುತ್ತಿರುವ ಈ ಸಂದರ್ಭದಲ್ಲಿಯೇ ದೇವಸ್ಥಾನಗಳಲ್ಲಿ ಸೋಂಕು ಶಂಕಿತರಿಗೆ ಆಶ್ರಯ ನೀಡಲು ಮುಂದಾಗಿದ್ದು ನಿಜಾಮುದ್ದೀನ್ ತಬ್ಲೀಗ್ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದವರನ್ನೂ ಇಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಹಾಗೆಯೇ ಚಿತ್ತೂರಿನ ಶ್ರೀಕಾಳಹಸ್ತಿ ಮತ್ತು ಕನಿಪಕಂ ವರಸಿದ್ಧಿ ವಿನಾಯಕ ದೇವಾಲಯಗಳ ಛತ್ರಗಳನ್ನು ಕೂಡಾ ಕ್ವಾರಂಟೈನ್ ಕೇಂದ್ರವನ್ನಾಗಿಸಲು ಆಡಳಿತ ಮಂಡಳಿ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ. ಭರತ್ ಗುಪ್ತಾ ಪದ್ಮಾವತಿ ನಿಲಯದ ಒಂದು ಬ್ಲಾಕ್ನ 100 ಕೊಠಡಿ, ಕನಿಪಕಂನಲ್ಲಿ 88 ಕೊಠಡಿಗಳು ಮತ್ತು ಶ್ರೀಕಳಹಸ್ತಿಯಲ್ಲಿ 14 ಕೊಠಡಿಗಳು ಕ್ವಾರಂಟೈನ್ಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಬ್ಲೀಗ್ ಸಭೆಯಲ್ಲಿ ಭಾಗವಹಿಸಿದ್ದ ಹಲವರು ಸೇರಿದಂತೆ 187 ಮಂದಿ ಪ್ರಸ್ತುತ ಪದ್ಮಾವತಿ ನಿಲಯದಲ್ಲಿದ್ದು ಕನಿಪಕಂನಲ್ಲಿ ಉಳಿದುಕೊಂಡಿದ್ದ ಸುಮಾರು 40 ಮಂದಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದರು.
ಇನ್ನು ಈ ಸ್ಥಳದಲ್ಲಿ ಶೌಚಾಲಯಗಳೂ ಕೊಠಡಿಯಲ್ಲೇ ಇರುವುದರಿಂದ ಇವುಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಲು ಸೂಕ್ತ ಎನ್ನುವ ಕಾರಣದಿಂದಾಗಿ ಇವುಗಳನ್ನು ಕ್ವಾರಂಟೈನ್ಗಾಗಿ ಬಳಸಲಾಗಿದೆ ಎಂದರು.
ತಿರುಪತಿ ದೇವಸ್ಥಾನದ ವಿಷ್ಣವಾಸಂ ಮತ್ತು ಶ್ರೀನಿವಾಸಂ ಮುಂತಾದ ವಿಶ್ರಾಂತಿ ಗೃಹಗಳಲ್ಲಿ ವಲಸೆ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಶ್ರಯ ಒದಗಿಸಲಾಗಿದೆ.