ಬೆಂಗಳೂರು, ಎ.07 (Daijiworld News/MB) : ಕೊರೊನಾ ನಿಯಂತ್ರಣ ಮಾಡಲೆಂದು ಪ್ರಧಾನಿ ಮೋದಿ ದೇಶದಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಮಾಡಿದ್ದು ಇದೇ 14 ರ ಬಳಿಕವೂ ಲಾಕ್ಡೌನ್ ಮುಂದುವರಿದ್ದಲ್ಲಿ ಮುಂದಿನ ತಿಂಗಳು ಸರ್ಕಾರಿ ನೌಕರರ ಸಂಬಳದಲ್ಲಿ ಕಡಿತ ಮಾಡಬೇಕಾಗಿ ಬರಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಖಾಸಗಿ ಮಾಧ್ಯಮದಲ್ಲಿ ಸಂದರ್ಶನದ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿದ ಅವರು, ರಾಜ್ಯದ ಆರ್ಥಿಕ ಸ್ಥಿತಿ ಲಾಕ್ಡೌನ್ ಕಾರಣದಿಂದಾಗಿ ಬಿಕ್ಕಟ್ಟಿನಲ್ಲಿದೆ. ನೌಕರರ ಹಿತ ಕಾಪಾಡುವ ಉದ್ದೇಶದಿಂದಾಗಿ ಏಪ್ರಿಲ್ ತಿಂಗಳಲ್ಲಿ ಯಾರಿಗೂ ಸಂಬಳ ಕಡಿತಗೊಳಿಸುವುದಿಲ್ಲ. ಲಾಕ್ಡೌನ್ ಇದೇ 14ಕ್ಕೆ ಕೊನೆಗೊಂಡರೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳಿ ಸಂಬಳ ಕೊಡುವುದಕ್ಕೆ ಯಾವ ತೊಂದರೆಯೂ ಆಗಲಾರದು, ಆದರೆ ಲಾಕ್ಡೌನ್ ಮುಂದುವರಿದರೆ ಮಾತ್ರ ಮುಂದಿನ ತಿಂಗಳ ಸಂಬಳದಲ್ಲಿ ಎಷ್ಟು ಕಡಿತ ಮಾಡಬೇಕಾಗಬಹುದು ಎಂಬುದರ ಬಗ್ಗೆ ಚರ್ಚಿಸ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ 2020–21ನೇ ಸಾಲಿನಲ್ಲಿ ₹33 ಸಾವಿರ ಕೋಟಿಗಳನ್ನು ಸಂಬಳಕ್ಕಾಗಿಯೇ ವಿನಿಯೋಗಿಸಬೇಕಿದ್ದು, ಒಟ್ಟು ವರಮಾನದ ಶೇ 90 ಭಾಗ ಇದಕ್ಕೇ ಖರ್ಚಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ತಿಳಿಸಿದ್ದಾರೆ.
ನಮ್ಮ ರಾಜ್ಯ ಮಾತ್ರವಲ್ಲ ಇತರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರದ ಹಣಕಾಸು ಸ್ಥಿತಿಯೂ ಉತ್ತಮವಾಗಿಲ್ಲ. ನಮ್ಮ ವರಮಾನ ಕುಸಿದಿರುವುದರಿಂದ ಎಲ್ಲ ಅಭಿವೃದ್ಧಿ ಚಟುವಟಿಕೆಗಳೂ ಸ್ಥಗಿತಗೊಂಡಿವೆ ಎಂದರು.
ಹಾಗೆಯೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ 14ರ ನಂತರ ಲಾಕ್ಡೌನ್ ಸಡಿಲಿಕೆ ಸಾಧ್ಯವಾಗಬಹುದು. ಲಾಕ್ಡೌನ್ ಯಶಸ್ಸು ಮಾಡಬೇಕಾದವರು ಜನರೇ ಎಂದು ಹೇಳಿದರು.