ನವದೆಹಲಿ, ಎ.07 (Daijiworld News/MB) : ಮಾರಾಣಾಂತಿಕ ಕೊರೊನಾ ವೈರಸ್ ಚಿಕಿತ್ಸೆಗಾಗಿ ಅಮೆರಿಕವು ಮಲೇರಿಯಾದ ಔಷಧ ರಫ್ತು ಮಾಡುವಂತೆ ವಿನಂತಿಸಿದ್ದು ಇದೀಗ ಭಾರತ ಕೇಂದ್ರ ಸರ್ಕಾರ ದೇಶೀಯ ನಿರ್ಮಿತ 24 ಔಷಧಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದೆ.
ಕೇಂದ್ರ ಸರ್ಕಾರ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ದೇಶೀ ನಿರ್ಮಿತ ಕೆಲ ಔಷಧಿಗಳ ಮೇಲೆ ನಿರ್ಬಂಧ ಹೇರಿತ್ತು. ಈ ಔಷಧಿಗಳನ್ನು ರಫ್ತು ಮಾಡದಂತೆ ಸೂಚನೆ ನೀಡಿತ್ತು. ಆದರೆ ಈಗ ಪ್ರಪಂಚದಾದ್ಯಂತ ಕೊರೊನಾ ವೈರಸ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು ಈ ಔಷಧಿಗಳ ಬೇಡಿಕೆ ಕೂಡ ಹೆಚ್ಚಾಗಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಲೇರಿಯಾ ವಿರೋಧಿ ಔಷಧ ಹೈಡ್ರೊಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ದೂರವಾಣಿ ಮೂಲಕ ಮಾತುಕತೆ ನಡೆಸಿ ಮನವಿ ಮಾಡಿದ್ದರು. ಅಮೆರಿಕ ಮಾತ್ರವಲ್ಲದೇ ಒಟ್ಟು ಮೂವತ್ತು ದೇಶಗಳು ಔಷಧಿಗಳ ಪೂರೈಕೆ ಮಾಡುವಂತೆ ಮನವಿ ಮಾಡಿದೆ.
ವಿಶ್ವದಾದ್ಯಂತ ಕೊರೊನಾ ತೀವ್ರ ರೀತಿಯಲ್ಲಿ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಇದೀಗ ಕೇಂದ್ರ ಸರ್ಕಾರ ಈ ಔಷಧಿಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದೆ.
ಭಾರತದಲ್ಲಿ ತಯಾರಾಗುವ ಪ್ಯಾರಸಿಟಮಲ್ಗಳು, ಪೇಯ್ನ್ ಕಿಲ್ಲರ್ಗಳು, ಇತರೆ ಸಂಯೋಜಕ ಔಷಧಿಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ.
ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ನೀಡಲಾಗುವ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತುವಿನ ಮೇಲಿನ ನಿರ್ಬಂಧವನ್ನು ತೆರವುಗೊಳಿಸದೇ ಹೋದರೆ ಪ್ರತೀಕಾರ ತೀರಿಸಿಕೊಳ್ಳುವ ಮುನ್ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದರು.