ಬೆಂಗಳೂರು,ಏ 07(Daijiworld News/MSP):ಕೊರೊನಾ ಎಂಬ ಕಾಯಿಲೆ ಜಗತ್ತಿನ ಮಾನವ ಕುಲಕ್ಕೆ ಕಂಟಕ ಕಾರ್ಯ ಆಗಿರುವುದರಿಂದ ಇದರ ನಿವಾರಣೆಯೂ ನಮ್ಮೆಲ್ಲರ ಶೃದ್ಧೆ ವಿಶ್ವಾಸಗಳೊಂದಿಗೆ ಮೊದಲ ಆದ್ಯತೆಯಾಗಬೇಕಿದೆ. ರೋಗಾಣು ನಾಶ ಜಗತ್ತಿನ ತುರ್ತು ಕೆಲಸವದ್ದರಿಂದ ದೇವರ ಧ್ಯಾನ ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ವೈರಸ್ ಆಗಲಿ ಅಥವಾ ಮನಸ್ಸಾಗಲಿ ಕೇಡನ್ನು ಅಳಿಸಿ ಒಳಿತನ್ನು ಉಳಿಸುವ ಸಂಕಲ್ಪ ನಮ್ಮದಾಗಲಿ ಎಂದು ಮುಸ್ಲಿಂ ಚಿಂತಕರ ಚಾವಡಿ ಕರೆ ನೀಡಿದೆ.
"ಕೊರೊನಾ ಕಂಟಕ ನಿವಾರಣೆಯ ಜ್ಞಾನಿಗಳು ವೈದ್ಯಕೀಯ ತಜ್ಞರು ಆಗಿರುವುದರಿಂದ ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಜೀವ ಉಳಿಸುವ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಪೊಲೀಸ್ ಆರೋಗ್ಯ ಕಾರ್ಯಕರ್ತರು ಪೌರಕಾರ್ಮಿಕರ ಪರಿವಾರವನ್ನು ಗೌರವಿಸಬೇಕಾಗಿದೆ. ಮುಖ್ಯವಾಗಿ ಸೋಂಕು ಶಂಕಿತರರನ್ನು ಕ್ವಾರಂಟೈನ್ ಕ್ರಮಕ್ಕೆ ಒಪ್ಪಿಸಬೇಕಾಗಿದೆ".
"ದುರಾದೃಷ್ಟವೆಂದರೆ ಭಾರತದಲ್ಲಿ ಈ ಮಾರಕ ರೋಗದ ಹರಡುವಿಕೆಯ ಆರೋಪವನ್ನು ಒಂದು ಧಾರ್ಮಿಕ ಸಮುದಾಯಕ್ಕೆ ಅಂಟಿಸಲಾಗುತ್ತದೆ. ಇಂತಹ ಧಾರ್ಮಿಕ ನೆಲೆಯ ಆರೋಪ, ನಿಂದನೆಗಳಿಗೆ ಸಂಯಮ ಕಳೆದುಕೊಳ್ಳದೆ , ಪ್ರತಿಯಾಗಿ ಸಂವಿಧಾನಿಕ ವೈಚಾರಿಕ ಕ್ರಮದಲ್ಲಿ ಉತ್ತರಿಸಬೇಕಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಸ್ಲಿಂ ಯುವಕರು ಸಮುದಾಯದ ತಳಸ್ತರದ ಜನತೆಯೊಂದಿಗೆ ಬೆರೆತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕವನ್ನು ಹೊಂದಬೇಕಾಗಿದೆ" ಎಂದು ಚಿಂತರಕ ಚಾವಡಿಯ ಡಾ.ರಹಮತ್ ತರೀಕೆರೆ, ಡಾ.ಮುಜಾಫರ್ ಅಸಾದಿ, ರಂಜಾನ್ ದರ್ಗಾ, ಅಬ್ದುಸ್ಸಲಾಂ ಪುತ್ತಿಗೆ, ಮುನೀರ್ ಕಾಟಿಪಳ್ಳ, ಬಾನು ಮುಷ್ತಾಕ್, ಬಿ.ಪೀರ್ ಬಾಷ, ಅನೀಸ್ ಪಾಶಾ, ಜೆ.ಕಲೀಂಬಾಷಾ, ಡಾ.ಸಿರಾಜ್ ಅಹಮ್ಮದ್ , ಡಾ.ರಜಾಕ್ ಉಸ್ತಾದ್ , ಇಮಾಮ್ ಗೋಡೆಕಾರ, ಶಾಕಿರಾ ಖಾನಂ ಕರೆ ನೀಡಿದ್ದಾರೆ.