ನವದೆಹಲಿ, ಏ 07(Daijiworld News/MSP): ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರು ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ದೆಹಲಿಯಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇದಲ್ಲದೆ ಕೊರೊನಾ ಸಕಾರಾತ್ಮಕ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಪ್ರದೇಶಗಳಲ್ಲಿ, ರ್ಯಾಂಡಮ್ ಟೆಸ್ಟ್ ಗಳನ್ನು ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಕ್ವಾರೈಂಟೈನ್ ಕೇಂದ್ರಗಳನ್ನು ಸ್ಥಾಪಿಸಲು ದೆಹಲಿ ಸರ್ಕಾರ ಚಿಂತಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ 5 ಅಂಶಗಳ ಯೋಜನೆ ಕುರಿತು ಇಂದು ಮಧ್ಯಾಹ್ನ 1 ಗಂಟೆಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 523 ಆಗಿದೆ. ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ 4,421 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ತಿಳಿಸಿದೆ.
4,421 ಪ್ರಕರಣಗಳಲ್ಲಿ 3,981 ಸಕ್ರಿಯ ಪ್ರಕರಣಗಳಾಗಿದ್ದು, ಇಲ್ಲಿಯವರೆಗೆ 325 ಪ್ರಕರಣಗಳನ್ನು ಗುಣಪಡಿಸಲಾಗಿದ್ದು ಇದುವರೆಗೆ 114 ಮಂದಿ ಕೊರೊನಾಕ್ಕೆ ಭಾರತದಲ್ಲಿ ಬಲಿಯಾಗಿದ್ದಾರೆ ಎಂದು ತಿಳಿಸಿದೆ.