ದಾವಣಗೆರೆ, ಏ 07(Daijiworld News/MSP): ದೇಶಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ಹರಡುವವರು ದೇಶದ್ರೋಹಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕೊರೊನಾ ಸೋಂಕು ಒಂದು ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಆದರೆ, ನಿಜಾಮುದ್ದೀನ್ ಗೆ ಹೋಗಿ ಬಂದವರಿಂದ ಸೋಂಕು ಮತ್ತೆ ವ್ಯಾಪಕವಾಗಿ ಹರಡಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ ನಿಜಾಮುದ್ದೀನ್ ನಿಂದ ವಾಪಾಸ್ ಆದವರು ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕೊರೊನಾ ಹರಡುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಕಿಡಿಕಾರಿದರು.
ದೇಶಕ್ಕೆ ನಿಜಾಮುದ್ದೀನ್ ಪ್ರಕರಣವೂ ತೊಡಕಾಗಿ ಪರಿಣಮಿಸಿದೆ. ತಪಾಸಣೆಗೆ ಒಳಗಾಗದೇ ಮನೆಯಲ್ಲಿ ಅವಿತುಕೊಳ್ಳುವ ಮೂಲಕ ಇತರರಿಗೆ ಮಾರಕ ಸೋಂಕು ಹರಡುವುದು ಒಂದು ರೀತಿ ಭಯೋತ್ಪಾದನೆ, ದೇಶದ್ರೋಹವಾಗಿದೆ. ತಾವು ಸತ್ತರೂ ಪರವಾಗಿಲ್ಲ, ಬೇರೆಯವರು ಸಾಯಬೇಕು ಎನ್ನುವುದು ಎಂತಹ ನ್ಯಾಯ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಾರು ವೈರಸ್ ಹರುಡುತ್ತಿದ್ದಾರೋ ಅದು ಪರೋಕ್ಷವಾಗಿ ಭಯೋತ್ಪಾದನೆ ನಡೆಸಿದಂತಾಗಿದೆ. ಇವರಿಗೆಲ್ಲ ದೇಶಕ್ಕಿಂತ ಧರ್ಮ, ಪ್ರಾರ್ಥನೆಯೇ ಪ್ರಮುಖ್ಯತೆ ಪಡೆಯಿತೆ ಎಂದು ಪ್ರಶ್ನಿಸಿದರು.