ನವದೆಹಲಿ, ಎ.07 (Daijiworld News/MB) : ಭಾರತ ಮಲೇರಿಯಾ ನಿರೋಧಕ ಔಷಧ ಪೂರೈಕೆ ಮಾಡದಿದ್ದಲ್ಲಿ ಪ್ರತೀಕಾರ ತೀರಿಸಬೇಕಾಬಹುದು ಎಂದು ಹೇಳಿದ ಟ್ರಂಪ್ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಿಡಿಮಡಿಗೊಂಡಿದ್ದಾರೆ.
ನಾನು ಈವರೆಗೆ ಒಂದು ದೇಶದ ವಿರುದ್ಧ ಬೆದರಿಕೆ ಹಾಕುವುದನ್ನು ನೋಡೇ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರು ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದು ಟ್ರಂಪ್ ಹೇಳಿಕೆ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಜಾಗತಿಕ ವ್ಯವಹಾರಗಳ ನನ್ನ ಈವರೆಗಿನ ಬದುಕಿನಲ್ಲಿ ದೇಶವೊಂದರ ಅಥವಾ ಸರ್ಕಾರವೊಂದರ ಮುಖ್ಯಸ್ಥರೊಬ್ಬರು ನೇರವಾಗಿ ಇನ್ನೊಂದು ದೇಶಕ್ಕೆ ಹೀಗೆ ಬೆದರಿಕೆ ಹಾಕುವುದನ್ನು ನೋಡಿಯೇ ಇಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ವಿಚಾರದಲ್ಲಿ ಭಾರತ ಪೂರೈಕೆ ರಾಷ್ಟ್ರ. ಅದು ನಿಮಗೆ ಪೂರೈಕೆಯಾಗುವುದು ಭಾರತ ಮಾರಾಟ ಮಾಡಿದಾಗ ಮಾತ್ರ ಎಂದು ತಿರುಗೇಟು ನೀಡಿದ್ದಾರೆ.
ವೈಟ್ ಹೌಸ್ನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಭಾರತ ಮಲೇರಿಯಾ ನಿರೋಧಕ ಔಷಧ ಪೂರೈಸದೇ ಹೋದರೆ ಅದಕ್ಕೆ ಪ್ರತಿಯಾಗಿ ಪ್ರತೀಕಾರವಂತೂ ಇದ್ದೇ ಇರುತ್ತದೆ. ಅಂಥದ್ದೊಂದು ನಿರ್ಧಾರವನ್ನು ಅಮೆರಿಕ ಕೈಗೊಳ್ಳಬಾರದೇಕೆ?’ ಎಂದು ಟ್ರಂಪ್ ಪ್ರಶ್ನಿಸಿದ್ದರು. ಈ ಮೊದಲು ದೂರವಾಣಿ ಮೂಲಕ ಪ್ರಧಾನಿ ಮೋದಿಯಲ್ಲಿ ಮಾತನಾಡಿ ಔಷಧಿ ಪೂರೈಸುವಂತೆ ಮನವಿ ಮಾಡಿದ್ದರು.
ಇನ್ನು ಭಾರತ ಸರ್ಕಾರವು ಮಂಗಳವಾರ ಮಲೇರಿಯಾ ಔಷಧಿ ಹೈಡ್ರೊಕ್ಸಿಕ್ಲೋರೊಕ್ವಿನ್ ಸೇರಿದಂತೆ ದೇಶೀಯ ನಿರ್ಮಿತ 24 ಔಷಧಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದೆ.
ಅಮೆರಿಕದಲ್ಲಿ 3 ಲಕ್ಷಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.