ಬೆಂಗಳೂರು, ಏ 07(Daijiworld News/MSP): ಕೊರೊನ ಹರಡುವಿಕೆ ತಡೆಗಟ್ಟಲು ಇರುವ ದಿಗ್ಬಂಧನವನ್ನು ಏ.೭ ರಿಂದ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ರಾಜ್ಯದಲ್ಲಿ ಅಗತ್ಯ ವಸ್ತುಗಳ ಕೊರತೆ ಇಲ್ಲ. ಹೀಗಾಗಿ ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಲಾಕ್ ಡೌನ್ ನಿಯಮಗಳನ್ನು ಪಾಲಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. ದಿನಸಿ , ತರಕಾರಿ ಹಾಗೂ ಔಷಧಿ ಸೇರಿದಂತೆ ಅತ್ಯಗತ್ಯ ವಸ್ತುಗಳ ಸಾಗಾಟ, ದಾಸ್ತಾನು ಸಾಮಾಗ್ರಿ, ಮತ್ತು ವಿತರಣೆ ಸಮರ್ಪಕವಾಗಿದೆ ಯಾರು ಆತಂಕ ಪಡಬೇಕಾಗಿಲ್ಲ ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದ್ದಾರೆ.
ಇನ್ನು ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸುವ ದೃಷ್ಟಿಯಿಂದ, ನೇರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಖಾಡಕ್ಕಿಳಿದಿದೆ.
ಈ ಬಗ್ಗೆ ರಾಜ್ಯ ಡಿಸಾಸ್ಟರ್ ಮ್ಯಾನೇಜಮೆಂಟ್ ಉಪಾಧ್ಯಕ್ಷ ಆರ್ ಅಶೋಕ್, ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಪೊಲೀಸರಿಗೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕುರಿತು ಸಂಪೂರ್ಣ ಅಧಿಕಾರ ನೀಡಿದೆ. ಅಲ್ಲದೆ ಡಿಜಿಪಿಗೆ ಪೂರ್ಣ ಅಧಿಕಾರ ನೀಡಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಲಾಕ್ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದಿದ್ದಾರೆ.