ಬೆಂಗಳೂರು, ಎ.07 (Daijiworld News/MB) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲ್ಲೇ ಇದ್ದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 12 ಮಂದಿಗೆ ಸೋಂಕು ತಾಗಿರುವುದು ದೃಢಪಟ್ಟಿದೆ. ರಾಜ್ಯದ ಸೋಂಕಿತರ ಸಂಖ್ಯೆ 175ಕ್ಕೇರಿದ್ದು ಮಂಡ್ಯ ಹಾಗೂ ಗದಗದಲ್ಲಿ ಕೊರೊನಾ ದೃಢಪಟ್ಟಿದ್ದು ಈ ಎರಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.
ಮಂಡ್ಯದಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು ಈ ಮೂವರು ದೆಹಲಿ ಮೂಲದ ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದರು ಎಂದು ಹೇಳಲಾಗಿದೆ. ಮಾರ್ಚ್ 23ರಿಂದ 29ರವರೆಗೆ 10 ಮಂದಿ ಧರ್ಮಗುರುಗಳು ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. 10 ಮಂದಿಯಲ್ಲಿ ಐವರಿಗೆ ಈಗಾಗಲೇ ಕೋವಿಡ್ 19 ದೃಢಪಟ್ಟಿದ್ದು ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದ 49 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಬೆಂಗಳೂರು ನಗರದಲ್ಲಿ ಮೂವರಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಓರ್ವ, ಮಂಡ್ಯದ ಮೂವರಿಗೆ, ಕಲಬುರಗಿಯ ಇಬ್ಬರಿಗೆ, ಬಾಗಲಕೋಟೆಯ ಇಬ್ಬರಿಗೆ ಸೋಂಕು ತಗಲಿದೆ. ಇದರೊಂದಿಗೆ ಗದಗದ 80 ವರ್ಷದ ವೃದ್ಧೆಗೆ ಸೋಂಕು ತಗಲಿದೆ.